ಮೈಸೂರು: ತಮ್ಮ ಪುತ್ರ ಡಾ. ಯತೀಂದ್ರ ಅವರ ರಾಜಕೀಯ ಜೀವನದ ಹಾದಿಯನ್ನು ಸುಗಮ ಮಾಡಿಕೊಡಲು ನಿರ್ಧರಿಸಿರುವ ಸಿಎಂ ಸಿದ್ದರಾಮಯ್ಯ ಪುತ್ರನನ್ನು ವರುಣಾ ವಿಧಾನಸಭಾ ಕ್ಷೇತ್ರದ ವಸತಿ ಯೋಜನೆಗಳ ಜಾಗೃತಿ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.
ಕ್ಷೇತ್ರದ ಶಾಸಕರೂ ಆಗಿರುವ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಕಾರ್ಯ ಭಾರವಿರುವ ಕಾರಣ ಸಮಿತಿಯ ಅಧ್ಯಕ್ಷತೆ ವಹಿಸಲು ಸಾಧ್ಯವಾಗದಿರುವುದರಿಂದ, ರಾಜ್ಯ ಸರ್ಕಾರವು ಈ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ. ವಸತಿ ಇಲಾಖೆಯ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಯತೀಂದ್ರ ಅವರು ಮೈಸೂರಿನಲ್ಲಿ ಹಲವು ರಾಜಕೀಯ ಸಭೆಗಳನ್ನು ನಡೆಸಿದ್ದರು, ಈ ಬಗ್ಗೆ ಹಲವರು ಅಸಮಾಧಾನ ವ್ಯಕ್ತ ಪಡಿಸಿದ್ದರು. ಹೀಗಾಗಿ ತಮ್ಮ ಪುತ್ರನಿಗೆ ಸಾಂವಿಧಾನಿಕ ಹುದ್ದೆ ನೀಡಿ ರಾಜಕೀಯ ದಾರಿ ಸುಗಮ ಮಾಡಿಕೊಟ್ಟಿದ್ದಾರೆ ಸಿಎಂ.
2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ದಿಸಲಿದ್ದು, ತಮ್ಮ ಪುತ್ರ ಯತೀಂದ್ರ ವರುಣಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.