ಮಠಾಧೀಶರ ರಾಜಕೀಯದಿಂದ ಲಿಂಗಾಯತ ಧರ್ಮ ಸ್ಥಾನಮಾನಕ್ಕೆ ವಿಳಂಬ: ಬಸವರಾಜ್ ಹೊರಟ್ಟಿ

ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂದು ರಾಜ್ಯ ಸರ್ಕಾರ ರಚಿಸುವ ತಜ್ಞರ ಸಮಿತಿಯನ್ನು...
ಶಾಸಕ ಬಸವರಾಜ ಹೊರಟ್ಟಿ
ಶಾಸಕ ಬಸವರಾಜ ಹೊರಟ್ಟಿ
ಬೆಂಗಳೂರು: ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂದು ರಾಜ್ಯ ಸರ್ಕಾರ ರಚಿಸುವ ತಜ್ಞರ ಸಮಿತಿಯನ್ನು ಲಿಂಗಾಯತ ಸಮುದಾಯದ ಕೆಲ ಮಠಾಧೀಶರು ವಿರೋಧಿಸುತ್ತಿರುವುದಕ್ಕೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಸಮಿತಿಯ ಪ್ರತಿನಿಧಿಗಳು ಟೀಕಿಸಿದ್ದಾರೆ.
ಸಮಿತಿಯ ಅಧ್ಯಕ್ಷ ಶಾಸಕ ಬಸವರಾಜ ಹೊರಟ್ಟಿ ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತ ಶ್ರೀಗಳಲ್ಲಿ ಏಕತೆ ಇಲ್ಲದಿರುವುದರಿಂದ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕೆ ವಿಳಂಬವಾಗುತ್ತಿದೆ. ಎಲ್ಲಾ ಸ್ವಾಮೀಜಿಗಳು ಒಗ್ಗಟ್ಟಾಗಿ ಬೇಡಿಕೆ ಮುಂದಿಟ್ಟರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಶಕ್ತಿಕೇಂದ್ರ ವಿಧಾನಸೌಧಕ್ಕಿಂತ ಹೆಚ್ಚಾಗಿ ಸ್ವಾಮೀಜಿಗಳು ಹೆಚ್ಚು ರಾಜಕೀಯ ಮಾಡುತ್ತಾರೆ ಎಂದು ಆರೋಪಿಸಿದರು.
ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ವಿಚಾರದಲ್ಲಿ ಬಿಜೆಪಿ ಜನರನ್ನು ಮೋಸ ಮಾಡಲು ಹೊರಟಿದೆ. ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಿಲ್ಲ. ಮಹಾರಾಷ್ಟ್ರದಲ್ಲಿ ಲಿಂಗಾಯತರು, ಆರ್ಎಸ್ಎಸ್ ನಾಯಕರು, ಬಿಜೆಪಿ ಶಾಸಕರು ಮತ್ತು ಸಚಿವರು ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದರು.
ಲಿಂಗಾಯತರಿಗೆ ಪ್ರತ್ಯೇಕ ಧಾರ್ಮಿಕ ಸ್ಥಾನಮಾನ ನೀಡಿದರೆ ಸಮುದಾಯವನ್ನು ವಿಭಜಿಸುತ್ತದೆ ಎಂಬ ಆರೋಪವನ್ನು ಹೊರಟ್ಟಿ ತಳ್ಳಿಹಾಕಿದರು. ನಮ್ಮ ಹೋರಾಟ ರಾಜಕೀಯಕ್ಕೆ ಹೊರತಾಗಿದೆ. ಲಿಂಗಾಯತ ಧರ್ಮದವರ ಉದ್ಧಾರಕ್ಕಾಗಿ ನಾವು ಪ್ರತ್ಯೇಕ ಧಾರ್ಮಿಕ ಸ್ಥಾನಮಾನವನ್ನು ಕೇಳುತ್ತಿದ್ದೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com