ಬಳ್ಳಾರಿಯಲ್ಲಿ ಕರುಣಾಕರ ರೆಡ್ಡಿ v/s ರೆಡ್ಡಿ ಬ್ರದರ್ಸ್ ಕೋಲ್ಡ್ ವಾರ್!
ಬಳ್ಳಾರಿ: ಮಾಜಿ ಸಚಿವ ಕರುಣಾಕರ ರೆಡ್ಡಿ ವಿರುದ್ಧ ಜಾತಿ ನಿಂದನೆ ಕೇಸು ಹಾಗೂ ಸಂಸದ ಬಿ. ಶ್ರೀರಾಮುಲು ವಿರುದ್ಧ 10 ಕ್ರಿಮಿನಲ್ ಕೇಸುಗಳನ್ನು ಕರುಣಾಕರ ರೆಡ್ಡಿ ದಾಖಲಿಸಿರುವುದು ಮೇಲ್ನೋಟಕ್ಕೆ ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ನಡುವಿನ ಕದನ ಎಂಬಂತೆ ಬಿಂಬಿತವಾಗುತ್ತಿದೆ.
ಆದರೆ ನಿಜವಾಗಿ ಸಮರ ಆರಂಭವಾಗಿರುವುದು ಕರುಣಾಕರ ರೆಡ್ಡಿ ಮತ್ತು ಜನಾರ್ಧನ ರೆಡ್ಡಿ ಹಾಗೂ ಸೋಮಶೇಖರ ರೆಡ್ಡಿ ನಡುವೆ ಎಂಬುದು ಜಗಜ್ಜಾಹೀರಾಗಿದೆ. ರೆಡ್ಡಿ ಕುಟುಂಬದ ಕೌಟುಂಬಿಕ ಕಲಹ ಬೀದಿಗೆ ಬಂದಿದೆ.
ತಮ್ಮ ಅಣ್ಣ ಕರುಣಾಕರ ರೆಡ್ಡಿಯಿಂದ ಸಹೋದರರಾದ ಜನಾರ್ದನ ರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಹಲವು ದಿನಗಳಿಂದ ಅಂತರ ಕಾಯ್ದುಕೊಂಡೇ ಬಂದಿದ್ದಾರೆ. ಆದರೆ ಶ್ರೀರಾಮುಲು ಮಾತ್ರ ಜನಾರ್ದನ ರೆಡ್ಡಿಯ ಆಪ್ತರಾಗಿದ್ದಾರೆ.
ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಾಲೋನಿ ಜಮೀನು ವಿವಾದದಲ್ಲಿ ಶ್ರೀರಾಮುಲು ಜೊತೆಗೆ ಜನಾರ್ದನ ಮತ್ತು ಸೋಮಶೇಖರ್ ರೆಡ್ಡಿ ಅವರನ್ನು ಕೋರ್ಟ್ ಗೆ ಎಳೆತರಲು ಕರುಣಾಕರ ರೆಡ್ಡಿ ಯತ್ನಿಸುತ್ತಿದ್ದಾರೆ.
ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ವಾಲ್ಮಾಕಿ ಜನಾಂಗದ ವ್ಯಕ್ತಿಯೊಬ್ಬರಿಂದ ಕರುಣಾಕರ ರೆಡ್ಡಿ ವಿರುದ್ಧ ಜಾತಿ ನಿಂದನೆ ಕೇಸು ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಶ್ರೀರಾಮುಲು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ದೂರು ನೀಡಿರುವ ವ್ಯಕ್ತಿ ಯಾರೆಂಬುದೇ ನನಗೆ ಗೊತ್ತಿಲ್ಲ, ಆತ ನನ್ನ ಬೆಂಬಲಿಗನಲ್ಲ ಎಂದು ಹೇಳಿದ್ದಾರೆ. ಆದರೆ ರೆಡ್ಡಿ ಸಹೋದರರ ನಡುವಿನ ಕಲಹಕ್ಕೆ ಏನು ಕಾರಣ ಎಂಬರು ಇದುವರೆಗೂ ಯಾರೋಬ್ಬರಿಗೂ ಸ್ಪಷ್ಟವಾಗಿ ತಿಳಿದಿಲ್ಲ.
2013ರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ ಆರ್ ಕಾಂಗ್ರೆಸ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿದ್ದ ಕರುಣಾಕರ ರೆಡ್ಡಿ ಸೋಲನುಭವಿಸಿದರು. ಇದೇ ಕಾರಣ ಇಬ್ಬರ ನಡುವಿನ ಭಿನ್ನಾಭಿಪ್ರಾಯ ಹೆಚ್ಚಲು ಕಾರಣವಾಯಿತು ಎನ್ನಲಾಗಿದೆ.
ಕರುಣಾಕರ ರೆಡ್ಡಿ ಹಲವು ವರ್ಷಗಳಿಂದಲೂ ಬಿಜೆಪಿಯಲ್ಲೇ ಇದ್ದಾರೆ, ಅವರು ಇಂದಿಗೂ ಬಿಜೆಪಿ ಸಖ್ಯ ತೊರೆದಿಲ್ಲ, ಆದರೆ ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಕರುಣಾಕರ ರೆಡ್ಡಿ ಭಾಗವಹಿಸಲಿಲ್ಲ, ಆದರೆ ಬಿಜೆಪಿಯ ಹಲವು ಕಾರ್ಯಕ್ರಮಗಳಲ್ಲಿ ಸೋಮಶೇಖರ ರೆಡ್ಡಿ ಭಾಗವಹಿಸಿದ್ದರು.
ಕಳೆದ ವರ್ಷದ ನವೆಂಬರ್ ನಲ್ಲಿ ಬೆಂಗಳೂರಿನ ಅರಮನೆಯಲ್ಲಿ ನಡೆದ ಜನಾರ್ದನ ರೆಡ್ಡಿ ಮಗಳ ವೈಭವೋಪೇತ ಮದುವೆಯಲ್ಲಿಯೂ ಕರಣಾಕರ ರೆಡ್ಡಿ ಭಾಗವಹಿಸಿರಲಿಲ್ಲ. ವಿವಾಹದ ಆಮಂತ್ರಣ ಪತ್ರಿಕೆಯಲ್ಲಿ ಕರುಣಾಕರ ರೆಡ್ಡಿ ಹೆಸರು ಎಲ್ಲಿಯೂ ನಮೂದಿಸಿರಲಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ