ಯಡಿಯೂರಪ್ಪ ವಿರುದ್ಧ ಅತೃಪ್ತ ನಾಯಕರ ಪತ್ರ: ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಬಿಎಸ್ ವೈ

ಯಡಿಯೂರಪ್ಪ ಅವರ ಏಕಪಕ್ಷೀಯ ತೀರ್ಮಾನಗಳ ವಿರುದ್ಧ ಅಸಮಾಧಾನ ಗೊಂಡಿರುವ ಕೆಲ ಬಿಜೆಪಿ ನಾಯಕರು ಬಿಎಸ್ ವೈ ವಿರುದ್ಧ ಪತ್ರ ಬರೆದ ಹಿನ್ನೆಲೆಯಲ್ಲಿ, ...
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಯಡಿಯೂರಪ್ಪ ಅವರ ಏಕಪಕ್ಷೀಯ ತೀರ್ಮಾನಗಳ ವಿರುದ್ಧ  ಅಸಮಾಧಾನ ಗೊಂಡಿರುವ ಕೆಲ ಬಿಜೆಪಿ ನಾಯಕರು ಬಿಎಸ್ ವೈ ವಿರುದ್ಧ ಪತ್ರ ಬರೆದ ಹಿನ್ನೆಲೆಯಲ್ಲಿ, ಉಲ್ಬಣಗೊಂಡಿರುವ ಬಿಕ್ಕಟ್ಟು ಶಮನಗೊಳಿಸುವಂತೆ ಆರ್ ಎಸ್ ಎಸ್ ಸೂಚಿಸಿದ ಬೆನ್ನಲ್ಲೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.

ಪಕ್ಷದ 24 ಮಂದಿ ಪತ್ರ ಬರೆದಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದ ಯಡಿಯೂರಪ್ಪ, ಈಗ ಅಸಮಾಧಾನ ಗೊಂಡಿರುವ ನಾಯಕರನ್ನು ಸಮಾಧಾನಗೊಳಿಸಲು ಮುಂದಾಗಿದ್ದು, ಜನವರಿ 19 ರಂದು ಸಭೆ ಕರೆದು ಅವರುಗಳ ಜೊತೆ ಸಮಾಲೋಚಿಸುವುದಾಗಿ ಹೇಳಿದ್ದಾರೆ.

ಬಿಜೆಪಿ ಎರಡನೇ ಸಾಲಿನ ಮುಖಂಡರೆಂದು ಗುರುತಿಸಿಕೊಂಡಿರುವ ಶಾಸಕರುಗಳಾದ ಭಾನುಪ್ರಕಾಶ್, ರಘುನಾಥ್ ರಾವ್ ಮಲ್ಕಾಪುರೆ, ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರುಗಳಾದ ಸೊಗಡು ಶಿವಣ್ಣ, ಮತ್ತು ರವೀಂದ್ರನಾಥ್ ಜನವರಿ 12 ರಂದು ಯಡಿಯೂರಪ್ಪ ಅವರ ಕಾರ್ಯ ವೈಖರಿಯನ್ನು ಪ್ರಶ್ನಿಸಿ ಪತ್ರ ಬರೆದಿದ್ದರು.

ಪಕ್ಷದ ಕಾರ್ಯಕರ್ತರ ನೇಮಕ, ಜಿಲ್ಲಾಧ್ಯಕ್ಷರು ಹಾಗೂ ತಾಲೂಕು ಅಧ್ಯಕ್ಷರ ನೇಮಕ ಸಂದರ್ಭದಲ್ಲಿ ಯಾರೊಂದಿಗೂ ಚರ್ಚಿಸದೇ ಏಕಪಕ್ಷೀಯ ನೇಮಕ ಸಂಬಂಧ ಅತೃಪ್ತ ನಾಯಕರು ಅಕ್ರೋಶ ವ್ಯಕ್ತಪಡಿಸಿದ್ದರು. ತಮಗೆ ಬೇಕಾದವರನ್ನು ನೇಮಕ ಮಾಡುವ ಮೂಲಕ ದಶಕಗಳ ಕಾಲ ಪಕ್ಷಕ್ಕಾಗಿ ದುಡಿದವರನ್ನು ನಿರ್ಲಕ್ಷ್ಯಿಸಲಾಗುತ್ತಿದೆ ಎಂದು ಆರೋಪಿಸಿದ್ದರು.

ಜೊತೆಗೆ ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರ ನಡುವಿನ ಭಿನ್ನಮತ ಶಮನಗೊಳಿಸುವಂತೆ ಪಕ್ಷದ ರಾಷ್ಟ್ರೀಯ ವರಿಷ್ಠರಿಗೆ ಮನವಿ ಮಾಡಲಾಗಿತ್ತು.

ಪತ್ರ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ಯಡಿಯೂರಪ್ಪ ನಿರಾಕರಿಸಿದ್ದರು ಈ ಹಿನ್ನೆಲೆಯಲ್ಲಿ ಪತ್ರ ವಿಚಾರವಾಗಿ ಮಾತನಾಡಿರುವ ಪಕ್ಷದ ವಕ್ತಾರ ಗೋ. ಮಧುಸೂದನ್‌ ಅವರು, ‘ಅಂತಹ ಯಾವುದೇ ಪತ್ರ ಬಂದಿಲ್ಲ. ಅದು ಕಿಡಿಗೇಡಿಗಳ ಕೃತ್ಯ’ ಎಂದು ಟೀಕಿಸಿದ್ದರು.

ಇನ್ನು ಈ ಮೊದಲು ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ತಾಲೂಕು ಅಧ್ಯಕ್ಷರ ನೇಮಕ ಸಂಬಂಧ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದ್ದ ಯಡಿಯೂರಪ್ಪ ಜನವಕಿ 19 ರಂದು ಅತೃಪ್ತರ ಜೊತೆ ಸಮಾಲೋಚಿಸಿ, ಅವರ ಅಭಿಪ್ರಾಯಗಳನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.
 
ಜನವರಿ 17 ರಂದು ಬೆಂಗಳೂರಿನಲ್ಲಿ ಆರ್ ಎಸ್ ಎಸ್ ಸಭೆ ನಡೆಯಲಿದ್ದು, ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಭಿನ್ನಾಭಿಪ್ರಾಯಗಳ ಶಮನಕ್ಕೆ ಯತ್ನ ನಡೆಸಲಾಗುವುದು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com