
ಮೈಸೂರು: ಪಕ್ಷ ತನ್ನನ್ನು ಮೂಲೆಗುಂಪು ಮಾಡಿದೆ ಎಂಬ ಭಾವನೆಯಿಂದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಸಕ್ರಿಯ ರಾಜಕೀಯದಿಂದ ನಿವೃತ್ತಿ ನಿರ್ಧಾರ ಮಾಡಿರಬಹುದು ಎಂದು ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಕೃಷ್ಣ ಅವರ ಕೊಡುಗೆಯನ್ನು ಕೊಂಡಾಡಿದ ಅವರು, ಅವರೊಬ್ಬ ಬಹಳ ಗೌರವಯುತ ರಾಜಕಾರಣಿ ಎಂದು ಹಾಡಿ ಹೊಗಳಿದ್ದಾರೆ.
ಕೃಷ್ಣ ಅವರ ಈ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಕಾರಣರಾಗಿದ್ದಾರೆ ಎಂದು ಆರೋಪಿಸಿದ ಅವರು, ಕಾವೇರಿ ವಿವಾದ ಭುಗಿಲೆದ್ದಾಗ ಸಿದ್ದರಾಮಯ್ಯ ಅವರು ಹಿರಿಯ ಮುಖಂಡ ಎಸ್ ಎಂ ಕೃಷ್ಣ ಅವರ ಸಲಹೆ ಪಡೆಯಬೇಕಿತ್ತು, ಆದರೆ ಸಿದ್ದರಾಮಯ್ಯ ಕೃಷ್ಣಾರನ್ನು ನಿರ್ಲಕ್ಷ್ಯಿಸಿದರು ಎಂದು ದೂರಿದ್ದಾರೆ,
ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದಾಗ ಹಲವು ಬಾರಿ ಎಸ್ ಎಂ ಕೃಷ್ಣ ಅವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದರು. ನಂತರ ಕಾಂಗ್ರೆಸ್ ಗೆ ಸೇರ್ಪಡೆಗೊಂಡು ಸಿಎಂ ಆದ ಬಳಿಕ ಸಿದ್ದರಾಮಯ್ಯ 50 ವರ್ಷಗಳ ರಾಜಕೀಯ ಅನುಭವವಿರುವ ಮುತ್ಸದ್ಧಿ ಕೃಷ್ಣ ಅವರನ್ನು ಭೇಟಿ ಮಾಡಿ ಅವರ ಬಳಿ ಯಾವುದೇ ಸಲಹೆ ಪಡೆಯಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಎಸ್.ಎಂ ಕೃಷ್ಣ ಅವರ ರಾಜಕೀಯ ನಿರ್ಧಾರ ಆಘಾತಕಾರಿಯಾಗಿದೆ ಮಾಜಿ ಸಿಎಂ ಧರ್ಮ ಸಿಂಗ್ ಹೇಳಿದ್ದಾರೆ.
Advertisement