ಜನಾರ್ದನ ರೆಡ್ಡಿ ಕೇಸ್ ಖುಲಾಸೆಗೆ ಬಿಜೆಪಿ ಜತೆ 500 ಕೋಟಿ ರು. ಒಪ್ಪಂದವಾಗಿದೆ: ಎಚ್ ಡಿಕೆ

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತಮ್ಮ ವಿರುದ್ಧದ ಕೇಸ್ ಖುಲಾಸೆಗೊಳಿಸಲು ಬಿಜೆಪಿಗೆ 500 ಕೋಟಿ ರುಪಾಯಿ ನೀಡುವ ಒಪ್ಪಂದವಾಗಿದೆ....
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
Updated on: 
ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತಮ್ಮ ವಿರುದ್ಧದ ಕೇಸ್ ಖುಲಾಸೆಗೊಳಿಸಲು ಬಿಜೆಪಿಗೆ 500 ಕೋಟಿ ರುಪಾಯಿ ನೀಡುವ ಒಪ್ಪಂದವಾಗಿದೆ. ಹೀಗಾಗಿ ರೆಡ್ಡಿಯ ಕೋಟ್ಯಾಂತರ ರು. ಆಸ್ತಿ ವಾಪಾಸ್ ಆಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಗಂಭೀರ ಆರೋಪ ಮಾಡಿದ್ದಾರೆ.
ಇಂದು ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸ್ವಾಭಿಮಾನಿ ಸಮಾನತೆ ಸಮಾವೇಶದಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಕಾರಣಕ್ಕಾಗಿ ರೆಡ್ಡಿ ವಿರುದ್ಧದ ಎಲ್ಲಾ ಕೇಸ್ ಗಳು ಖುಲಾಸೆಯಾಗುತ್ತಿದ್ದು, ಈ ಸಂಬಂಧ 500 ಕೋಟಿ ರುಪಾಯಿ ಒಪ್ಪಂದವಾಗಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಇನ್ನು ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಎಚ್ ಡಿಕೆ, ಬರ ಪರಿಹಾರಕ್ಕೆ ಕೇವಲ 450 ಕೋಟಿ ರುಪಾಯಿಯನ್ನು ಕೇಂದ್ರ ಬಿಡುಗಡೆ ಮಾಡಿದೆ. ಹಾಗಾದರೆ ರಾಜ್ಯದಲ್ಲಿ ಸಂಕಷ್ಟ ಸಮಯದಲ್ಲಿ ಜನ ಬಿಕ್ಷೆ ಬೇಡಬೇಕಾ? ಎಂದು ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶದ ಬಳಿಕ ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬರುತ್ತಾರೆ, ಇದರಿಂದ ಸುಲಭವಾಗಿ ಅಧಿಕಾರಕ್ಕೆ ಬರುತ್ತೇವೆ ಎಂದು ರಾಜ್ಯ ಬಿಜೆಪಿ ನಾಯಕರು ಕನಸು ಕಾಣುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅಶ್ವಮೇಧಯಾಗದ ಕುದುರೆ ಕಟ್ಟಿಹಾಕುವ ಶಕ್ತಿ ಜೆಡಿಎಸ್​ಗೆ ಇದೆ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಮಾಜಿ ಸಿಎಂ, ರಾಜ್ಯದ ಸಂಪತ್ತನ್ನು ಕೊಳ್ಳೆಹೊಡೆದು ಹೈಕಮಾಂಡ್​ಗೆ ಕಳುಹಿಸಿದ ದುಡ್ಡಲ್ಲೇ ರೈತರ ಸಾಲಮನ್ನ ಮಾಡಬಹುದಿತ್ತು. ರಾಜ್ಯದಲ್ಲಿ ಸುಮಾರು 60,000 ಕೋಟಿ ರು.ಬೆಳೆ ನಷ್ಟವಾಗಿದೆ. ಸಾಲಮನ್ನ ಮಾಡಿದರೆ ರೈತರು ಆ ನಷ್ಪದಿಂದ ಸ್ವಲ್ಪ ಚೇತರಿಸಿಕೊಳ್ಳುತ್ತಾರೆ. ನಾನು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಟ್ರಾಕ್ಟರ್, ರಾಷ್ಪ್ರೀಕೃತ, ಸಹಕಾರಿ ಬ್ಯಾಂಕ್​ಗಳ ರೈತರ ಎಲ್ಲಾ ಸಾಲ ಮನ್ನಾ ಮಾಡುತ್ತೇನೆ. ಈ ಮೂಲಕ ರೈತರನ್ನು ಕಾಪಾಡುತ್ತೇನೆ ಎಂದಿದ್ದಾರೆ.
ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಅನ್ಯಾಯ ಮಾಡಿವೆ. ರಾಜ್ಯದ ಸಂಪತ್ತನ್ನು ಕೊಳ್ಳೆಹೊಡೆದು ಹೈಕಮಾಂಡ್​ಗೆ ಕಪ್ಪದ ರೂಪದಲ್ಲಿ ಕಳುಹಿಸದ ಹಣವನ್ನೇ ರೈತರ ಸಾಲ ಮನ್ನಾ ಮಾಡಲು ಬಳಕೆ ಮಾಡಬಹುದಿತ್ತು. ಒಬ್ಬರು ಡೈರಿ, ಮತ್ತೊಬ್ಬರು ಸಿಡಿ ಹಗರಣದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಕಡೆಗಣಿಸುತ್ತಿದ್ದಾರೆ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ಸಮಾವೇಶದಲ್ಲಿ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಎಚ್.ಡಿ.ರೇವಣ್ಣ, ರಾಷ್ಟ್ರೀಯ ಕಾರ್ಯದರ್ಶಿ ಡ್ಯಾನಿಶ್ ಅಲಿ, ಜಫ್ರುಲ್ಲಾ ಖಾನ್, ಶಾಸಕ ವೈ.ಎಸ್.ವಿ. ದತ್ತ, ಎಂ.ಸಿ.ನಾಣಯ್ಯ, ಮಾಜಿ ಶಾಸಕ ಬಂಡೆಪ್ಪ ಕಾಶಂಪುರ್ ಸೇರಿ ಹಲವರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com