
ಬೆಂಗಳೂರು: 2017-18ನ ಸಾಲಿನ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ತಮ್ಮ ಆಯವ್ಯಯದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.
ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಸಬ್ ಸಾಥ್ , ಸಬ್ ಕಾ ವಿಕಾಸ್ ಎಂಬ ಘೋಷಣೆಯಡಿ ಬಜೆಟ್ ಮಂಡಿಸಲಾಗಿದೆ, ನನ್ನದು ಕರ್ನಾಟಕ ಅಭಿವೃದ್ಧಿ ಮಾದರಿ, ಇದರಲ್ಲಿ ಸಮಾಜದ ಎಲ್ಲಾ ವರ್ಗಗಳ ಜನರ ಅಭಿವೃದ್ಧಿಯಿದೆ ಎಂದು ತಮ್ಮನ್ನು ತಾವೇ ಪ್ರಶಂಸಿಕೊಂಡಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿಯವರು ಅವರ ಮೋದಿ ಅಲೆ ಎಂದು ನೀಡುವ ಹೇಳಿಕೆಗೆ ಟಾಂಗ್ ನೀಡಿದ ಸಿದ್ದರಾಮಯ್ಯ ಬಿಜೆಪಿ ಈಗ ಗುಜರಾತ್ ಮಾದರಿ ಅಭಿವೃದ್ಧಿ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ, ಯುಪಿ ಮಾದರಿ ಬಗ್ಗೆ ಜಾಹೀರಾತು ನೀಡುತ್ತಿದ್ದಾರೆ ಎಂದು ಟೀಕಿಸಿದರು.
ನಾವು ನಮ್ಮದೇ ಅಭಿವೃದ್ಧಿ ಮಾದರಿ ಹೊಂದಿದ್ದೇವೆ, ಅದು ಕರ್ನಾಟಕ ಅಭಿವೃದ್ಧಿ ಮಾದರಿ, ಅದರಂತೆಯೇ ನಾವು ನಡೆಯುತ್ತೇವೆ, ನಂಜನಗೂಡು ಮತ್ತು ಗುಂಡ್ಲು ಪೇಟೆ ವಿಧಾನಸಭೆ ಉಪ ಚುನಾವಣೆ ಮತ್ತು ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಅದರ ಅಡಿಯಲ್ಲೇ ಸ್ಪರ್ಧಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಉಪ ಚುನಾವಣೆಲ್ಲಿ ಜಯ ಗಳಿಸುತ್ತೇವೆ ಎಂಭ ಭ್ರಮೆಯಲ್ಲಿ ಕಾಂಗ್ರೆಸ್ ಮುಳುಗಿದೆ ಎಂದು ಅವರು ವ್ಯಂಗ್ಯವಾಡಿದರು.
ಹಲವು ಯೋಜನೆಗಳನ್ನು ಜಾರಿಗೆ ತಂದಿರುವುದು ಸರ್ಕಾರದ ಕಾರ್ಯ ವೈಖರಿಯನ್ನು ತೋರಿಸುತ್ತದೆ. ನಾವು ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಯ ಕಡೆ ನಮ್ಮ ಗಮನವ ಹರಿಸಿದ್ದೇವೆ ಎಂದು ಹೇಳಿದ ಸಿದ್ದರಾಮಯ್ಯ, ಚನಾವಣೆ ವೇಳೆ ಪ್ರಣಾಳಿಕೆಯಲ್ಲಿ ನೀಡಿದ್ದ 165 ಆಶ್ವಾಸನೆಗಳ ಪೈಕಿ ಶೇ.90 ರಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ತಿಳಿಸಿದ್ದಾರೆ.
Advertisement