'ಜಾರಕಿಹೊಳಿ' ಸಹೋದರರ ನಂತರ ಬೀದಿಗೆ ಬಂತು 'ಲಾಡ್ ಬ್ರದರ್ಸ್' ಕಿತ್ತಾಟ

ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ನಡುವಿನ ಭಿನ್ನಮತ ಭುಗಿಲೆದ್ದಿದ್ದು, ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅದನ್ನು ಶಮನಗೊಳಿಸಿದ...
ಅನಿಲ್ ಲಾಡ್ ಮತ್ತು ಸಂತೋಷ್ ಲಾಡ್
ಅನಿಲ್ ಲಾಡ್ ಮತ್ತು ಸಂತೋಷ್ ಲಾಡ್
ಬೆಂಗಳೂರು: ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ನಡುವಿನ ಭಿನ್ನಮತ ಭುಗಿಲೆದ್ದಿದ್ದು, ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅದನ್ನು ಶಮನಗೊಳಿಸುವ ಯತ್ನ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಳ್ಳಾರಿಯಲ್ಲಿ ಲಾಡ್ ಬ್ರದರ್ಸ್ ಕಿತ್ತಾಟ ಬಹಿರಂಗವಾಗಿದೆ.
ಬೆಳಗಾವಿ ನಂತರ ವೇಣುಗೋಪಾಲ್ 2 ನೇ ದಿನ ಜಿಲ್ಲಾ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು. ಈ ವೇಳೆ ಲಾಡ್‌ ಸಹೋದರರ ಕಿತ್ತಾಟದಿಂದ ಬಳ್ಳಾರಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಅಡ್ಡಿಯಾಗಿದ್ದು, ತಕ್ಷಣ ಸಮಸ್ಯೆ ಬಗೆಹರಿಸಬೇಕು ಎಂದು ಪಕ್ಷದ ಸ್ಥಳೀಯ ಪ್ರಮುಖರು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಎದುರು ಅಳಲು ತೋಡಿಕೊಂಡಿದ್ದಾರೆ.
ಸಚಿವ ಸಂತೋಷ್‌ ಲಾಡ್‌ ಜೊತೆ ಸಭೆಗೆ ಬಂದ ಬಳ್ಳಾರಿ ಜಿಲ್ಲಾ ಘಟಕದ ನಾಯಕರು, ಶಾಸಕ ಅನಿಲ್‌ ಲಾಡ್‌ ಮತ್ತು ಸಂತೋಷ್‌ ಲಾಡ್‌ ಸಹೋದರರ ತಿಕ್ಕಾಟದಿಂದ ಸಂಘಟನೆಗೆ ತೊಂದರೆಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಸಹೋದರರ ನಡುವಿನ ಭಿನ್ನಮತ ಬಗೆಹರಿಯದಿದ್ದರೆ 2018ರ ವಿಧಾನ ಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವುದು ಅಸಾಧ್ಯ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಪ್ರವಾಸಕ್ಕೆ ತೆರಳಿರುವುದರಿಂದ ಅನಿಲ್‌ ಲಾಡ್‌ ಸಭೆಗೆ ಬಂದಿರಲಿಲ್ಲ. ಅಮೆರಿಕದಿಂದ ಅನಿಲ್‌ ಲಾಡ್‌ ಮರಳಿದ ಬಳಿಕ ಇಬ್ಬರನ್ನೂ ಕರೆದು ಮತ್ತೊಮ್ಮೆ ಸಭೆ ನಡೆಸುತ್ತೇನೆ  ಎಂದು ವೇಣುಗೋಪಾಲ್‌ ಭರವಸೆ ನೀಡಿದ್ದಾರೆ. ಸಚಿವರಾಗಿರುವ ನೀವೇ ಎಲ್ಲವನ್ನೂ ಸರಿಪಡಿಸಿಕೊಂಡು ಹೋಗಬೇಕು ಎಂದು ಸಂತೋಷ್‌ ಲಾಡ್‌ಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸೂಚಿಸಿದ್ದಾರೆ.
ಮುಂಬರುವ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕು. ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು. ಜಿಲ್ಲೆಯ ಎಲ್ಲ ಒಂಬತ್ತು ವಿಧಾನ ಸಭಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ವೇಣುಗೋಪಾಲ್‌ ಸೂಚಿಸಿದ್ದಾರೆ ಎಂದು ಸಂತೋಷ್‌ ಲಾಡ್‌ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com