ಬೆಂಗಳೂರು: ಬಲಿಜ ಸಮಾಜಕ್ಕೆ ಹಿಂದುಳಿದ ಪ್ರವರ್ಗ 2ಎ ಅಡಿ ಉದ್ಯೋಗ ಹಾಗೂ ರಾಜಕೀಯ ಮೀಸಲಾತಿ ಕಲ್ಪಿಸುವ ಬೇಡಿಕೆಯನ್ನು ಕೂಲಂಕಷವಾಗಿ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ಬಲಿಜ ಮಹಾಸಭಾ ಆಶ್ರಯದಲ್ಲಿ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಬಲಿಜ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಕೆಲವೇ ತಿಂಗಳುಗಳಲ್ಲಿ ಕೈಸೇರಲಿದೆ. ಆ ಬಳಿಕ, ಬೇಡಿಕೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ಬಲಿಜ ಸಮಾಜವನ್ನು 2ಎ ಪ್ರವರ್ಗಕ್ಕೆ ಸೇರಿಸಲು ಸಂವಿಧಾನ ತಿದ್ದುಪಡಿ ಅಗತ್ಯವಿಲ್ಲ. ಈ ಬೇಡಿಕೆಯನ್ನು ಈಡೇರಿಸುವಂತೆ ನಾನೂ ವಿನಂತಿ ಮಾಡುತ್ತೇನೆ. ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದೆ. ಅವರು ಏನು ತೀರ್ಮಾನ ಮಾಡುತ್ತಾರೋ ನೋಡೋಣ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ ನಾನು ಮತ್ತೆ ಮುಖ್ಯಮಂತ್ರಿಯಾದರೆ ಬಲಿಜ ಸಮಾಜಕ್ಕೆ 24 ಗಂಟೆಯಲ್ಲಿ ಔದ್ಯೋಗಿಕ ಹಾಗೂ ರಾಜಕೀಯ ಮೀಸಲಾತಿ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.