ಹೊಸ ಪಕ್ಷದ ಮೂಲಕ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ರಾಜಕೀಯಕ್ಕೆ ಎಂಟ್ರಿ

ರಾಜಕೀಯ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು, ಪೊಲೀಸ್ ಅಧಿಕಾರಿಯ ಹುದ್ದೆಗೇ ರಾಜಿನಾಮೆ ನೀಡಿದ್ದ ಕೂಡ್ಲಿಗಿ ಉಪ ವಿಭಾಗದ....
ಅನುಪಮಾ ಶೆಣೈ
ಅನುಪಮಾ ಶೆಣೈ
ಮಂಗಳೂರು: ರಾಜಕೀಯ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು, ಪೊಲೀಸ್ ಅಧಿಕಾರಿಯ ಹುದ್ದೆಗೇ ರಾಜಿನಾಮೆ ನೀಡಿದ್ದ ಕೂಡ್ಲಿಗಿ ಉಪ ವಿಭಾಗದ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ನವೆಂಬರ್ 1ರಂದು, ರಾಜ್ಯೋತ್ಸವ ದಿನದಂದೇ ತಮ್ಮದೇ ಆದ ಹೊಸ ಪ್ರಾದೇಶಿಕ ಪಕ್ಷ ಘೋಷಿಸುವ ಮೂಲಕ ಸಕ್ರಿಯೆ ರಾಜಕೀಯ ಪ್ರವೇಶಿಸುತ್ತಿದ್ದಾರೆ. 
ಶೆಣೈ ಅವರು ಕಳೆದ ವರ್ಷ ಜೂನ್ ನಲ್ಲಿ ಡಿವೈಎಸ್ಪಿ ಹುದ್ದೆಗೆ ರಾಜಿನಾಮೆ ನೀಡಿದ್ದರು. ನಿನ್ನೆ ಉಡುಪಿ ಜಿಲ್ಲೆಯ ಉಚ್ಚಿಲದ ತಮ್ಮ ನಿವಾಸದಲ್ಲಿ ಸಮಾನ ಮನಸ್ಕರ ಜತೆ ಸಮಾಲೋಚನ ಸಭೆ ನಡೆಸಿದ ಬಳಿಕ ರಾಜಕೀಯ ಪಕ್ಷ ಕಟ್ಟುವುದಾಗಿ ಫೇಸ್ ಬುಕ್ ನಲ್ಲಿ ಘೋಷಿಸಿಕೊಂಡಿದ್ದಾರೆ.
ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮಾಜಿ ಪೊಲೀಸ್ ಅಧಿಕಾರಿ, ನಾನು ಕಳೆದ ಒಂದು ವರ್ಷದಿಂದ ರಾಜಕೀಯಕ್ಕೆ ಪ್ರವೇಶಿಸುವ ಬಗ್ಗೆ ಚಿಂತನೆ ನಡೆಸಿದ್ದೆ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ, ಆಮ್ ಆದ್ಮಿ ಪಕ್ಷ ಸೇರುವ ಸಾಧ್ಯತೆ ಬಗ್ಗೆ ಚರ್ಚಿಸಿದ್ದೆ. ಆದರೆ ಅಂತಿಮವಾಗಿ ರಾಜ್ಯದಲ್ಲಿ ಹೊಸದೊಂದು ಪಕ್ಷ ಸ್ಥಾಪಿಸುವುದಕ್ಕೆ ಮುಂದಾಗಿದ್ದೇನೆ ಎಂದಿದ್ದಾರೆ. 
ಮುಂದಿನ ದಿನಗಳಲ್ಲಿ ಬಳ್ಳಾರಿ ಅಥವಾ ಕೂಡ್ಲಗಿಯಲ್ಲಿ ಪತ್ರಿಕಾಗೋಷ್ಠಿ ಕರೆದು ತಮ್ಮ ನೂತನ ರಾಜಕೀಯ ಪಕ್ಷದ ಹೆಸರು ಘೋಷಿಸುವುದಾಗಿ ಅನುಪಮಾ ಶೆಣೈ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಹೊಸ ರಾಜಕೀಯ ಪಕ್ಷಕ್ಕೆ ಅವಕಾಶವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೆಣೈ ಅವರು, ನಾನು ನನ್ನ ಸ್ವಾರ್ಥಕ್ಕಾಗಿ ರಾಜಕೀಯ ಪಕ್ಷ ಕಟ್ಟುತ್ತಿಲ್ಲ. ಸದ್ಯದ ರಾಜಕೀಯ ಪರಿಸ್ಥಿತಿಯ ವಿರುದ್ಧ ಹೋರಾಡುವುದಕ್ಕಾಗಿ ರಾಜಕೀಯ ಪಕ್ಷ ಕಟ್ಟುತ್ತಿದ್ದೇನೆ ಮತ್ತು ಇದರಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ನಮ್ಮ ನೂತನ ಪಕ್ಷ ಮುಂಬರುವ 2018ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಮತ್ತು ಕನಿಷ್ಠ 60 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಶೆಣೈ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com