ಟಿಕೆಟ್ ಆಕಾಂಕ್ಷಿಗಳು ತಮ್ಮ ಅರ್ಹತೆ ಸಾಬೀತು ಪಡಿಸಲಿ: ದೇವೇಗೌಡರ ಹೊಸ ವರಸೆ!

ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಟಿಕೆಟ್ ಗಾಗಿ ಹವಣಿಸುತ್ತಿರುವ ಆಕಾಂಕ್ಷಿಗಳಿಗೆ ಜೆಡಿಎಸ್ ವರಿಷ್ಠ ದೇವೇಗೌಡ ಹೊಸ ಟಾರ್ಗೆಟ್ ನೀಡಿದ್ದಾರೆ. ..
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ
ಬೆಂಗಳೂರು: ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಟಿಕೆಟ್ ಗಾಗಿ ಹವಣಿಸುತ್ತಿರುವ ಆಕಾಂಕ್ಷಿಗಳಿಗೆ ಜೆಡಿಎಸ್ ವರಿಷ್ಠ ದೇವೇಗೌಡ ಹೊಸ ಟಾರ್ಗೆಟ್ ನೀಡಿದ್ದಾರೆ. 
ಟಿಕೆಟ್ ಆಕಾಂಕ್ಷಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾರರ ಜೊತೆ ಯಾವ ರೀತಿಯ ಸಂಬಂಧ ಹೊಂದಿದ್ದಾರೆ ಎಂಬುದನ್ನು ಸಾಬೀತು ಪಡಿಸಬೇಕು ಎಂಬ ಟಾರ್ಗೆಟ್ ನೀಡಿದ್ದಾರೆ, ಮತದಾರರ ಜೊತೆ ಅಭ್ಯರ್ಥಿಯೂ ಯಾವ ರೀತಿ ಸಂಪರ್ಕ ಹೊಂದಿದ್ದಾರೆ ಎಂಬ ವರದಿಯನ್ನು ಎಂಎಲ್ ಸಿ ರಮೇಶ್ ಬಾಬು ನೇತೃತ್ವದ ಬೂತ್ ಸಮಿತಿ ಕೋರ್ ಕಮಿಟಿಗೆ ನೀಡಬೇಕು,  ಸಮನ್ವಯ ಸಮಿತಿ ಈ ವರದಿಯನ್ನ ಪಕ್ಷದ ವರಿಷ್ಠರಿಗೆ ನೀಡುತ್ತದೆ ಎಂದು ಹೇಳಿದ್ದಾರೆ.
ಜೆಡಿಎಸ್‌ ಸಮ್ಮಿಶ್ರ ಸರ್ಕಾರದ 20 ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಅವರು ಮಾಡಿದ ಸಾಧನೆ ಸೇರಿ ಜೆಡಿಎಸ್‌ನ ಕಾರ್ಯಕ್ರಮಗಳ ಕುರಿತ ಕೈಪಿಡಿ ಮತದಾರರ ಮನೆ ಬಾಗಿಲಿಗೆ ತಲುಪಿಸುವ ಹೊಣೆಗಾರಿಕೆಯನ್ನು ಆಕಾಂಕ್ಷಿಗಳಿಗೆ ವಹಿಸಲಾಗಿದೆ. ಜೊತೆಗೆ ದೇವೇಗೌಡರು ಪ್ರಧಾನಿ ಹಾಗೂ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಪ್ರತಿ ಮತದಾರನ ಮನೆಗೆ ತಲುಪಿಸುವ ಜವಾಬ್ದಾರಿ ನೀಡಲಲಾಗಿದೆ. 
ಈ ಕೆಲಸದಲ್ಲಿ ವಿಫ‌ಲರಾಗುವವರಿಗೆ ವಿಧಾನಸಭೆ ಟಿಕೆಟ್‌ ಕೊಡುವುದಿಲ್ಲ. ಒಂದೊಮ್ಮೆ ಈಗಾಗಲೇ ಅಭ್ಯರ್ಥಿ ಎಂದು ಗುರುತಿಸಿದ್ದರೂ ಮುಲಾಜಿಲ್ಲದೆ ಬದಲಾಯಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 
ಸದ್ಯ ಇರುವ 33 ಜೆಡಿಎಸ್ ಶಾಸಕರಿಗೆ ಟಿಕೆಟ್ ನಿಶ್ಚಿತವಾಗಿದ್ದು, ಉಳಿದ 191 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಬಾಕಿ ಉಳಿದಿದೆ,. ಡಿಸೆಂಬರ್ ತಿಂಗಳ ಅಂತ್ಯದೊಳಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ದೇವೇಗೌಡ ಹೇಳಿದ್ದಾರೆ. 
ಪಕ್ಷದ ಎಲ್ಲಾ ಕಾರ್ಯಕರ್ತರು ಚುನಾವಣೆಯನ್ನು ಹಗುರವಾಗಿ ಪರಿಗಣಿಸದೇ ಗಂಭೀರವಾಗಿ ಸಿದ್ದತೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ, ಶಸ್ತ್ರಚಿಕಿತ್ಸೆಗೊಳಗಾಗಿದ್ದು,  ವೈದ್ಯರು  ಅಕ್ಟೋಬರ್ ಅಂತ್ಯದವರೆಗೊ ಬೆಡ್ ರೆಸ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಚುನಾವಣಾ ಜವಾಬ್ದಾರಿಯನ್ನು ದೇವೇಗೌಡ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಅಥವಾ ಬಿಜೆಪಿ ಜೊತೆಗಿನ ಮೈತ್ರಿ  ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿದ ದೇವೇಗೌಡರು ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಹಾಗೂ 28 ಲೋಕಸಭೆ ಕ್ಷೇತ್ರಗಳಲ್ಲೂ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಿದ್ದಾರೆ.
ಮೀಸಲಾತಿ ಪ್ರಮಾಣ ಶೇ.70ರಷ್ಟು ಹೆಚ್ಚಿಸುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹುಡುಗಾಟ ಆಡುವುದು ಬೇಡ.ಆಂಧ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ಇಂತಹ ಪ್ರಯತ್ನಕ್ಕೆ ಸುಪ್ರೀಂಕೋರ್ಟ್‌ ತಳ್ಳಿಹಾಕಿದ ನಿದರ್ಶನಗಳು ಇದ್ದರೂ ಪ್ರಚಾರಕ್ಕಾಗಿ ಇಂತಹ ಮಾತುಗಳು ಸಲ್ಲದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com