ಚಾಮುಂಡೇಶ್ವರಿ ಕ್ಷೇತ್ರದಿಂದ ಹೆಚ್.ಡಿ. ಕುಮಾರಸ್ವಾಮಿ ಚುನಾವಣಾ ಪ್ರಚಾರ ಆರಂಭ

ಮುಂದಿನ ವಿಧಾನಸಭೆ ಚುನಾವಣಾ ಪ್ರಚಾರ ಕಾರ್ಯವನ್ನು ನ.1 ರಿಂದ ಆರಂಭ ಮಾಡಲಿದ್ದು, ಚಾಮುಂಡೇಶ್ವರಿ ದೇವಿಯ ದರ್ಶನ ಮಾಡುವ ಮೂಲಕ ಅಧಿಕೃತ ಪ್ರವಾಸ ಆರಂಭಿಸಲಾಗುವುದು ಎಂಜು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರು...
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣಾ ಪ್ರಚಾರ ಕಾರ್ಯವನ್ನು ನ.1 ರಿಂದ ಆರಂಭ ಮಾಡಲಿದ್ದು, ಚಾಮುಂಡೇಶ್ವರಿ ದೇವಿಯ ದರ್ಶನ ಮಾಡುವ ಮೂಲಕ ಅಧಿಕೃತ ಪ್ರವಾಸ ಆರಂಭಿಸಲಾಗುವುದು ಎಂಜು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರು ಬುಧವಾರ ಹೇಳಿದ್ದಾರೆ. 
ಪದ್ಮನಾಭನಗರದ ನಿವಾಸದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರವಾಸಕ್ಕಾಗಿ ಈಗಾಗಲೇ ಕಾರ್ಯಕರ್ತರು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಲಾಗಿದೆ. ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ  ಅವರ ನೇತೃತ್ವದಲ್ಲಿ ಪ್ರವಾಸಕ್ಕೆ ಚಾಲನೆ ನೀಡಲಾಗುವುದು. ಅಲ್ಲಿಂದಲೇ ನಿರಂತರವಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 
ಚುನಾವಣಾ ಪ್ರಚಾರದ ವೇಳೆ ಹಲವು ಸಭೆ ಹಾಗೂ ಸಮಾರಂಭಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಉತ್ತರ ಕರ್ನಾಟಕ ಪ್ರವಾಸದ ವೇಳೆ ಕಾಂಗ್ರೆಸ್ ನಿಂದ ಹೊರಬಂದಿರುವ ಶಾಸಕ. ಎ.ಎಸ್. ಪಾಟೀಲ್ ನಡಹಳ್ಳಿ ಅವರು ತಮಗೆ ಸಾಥ್ ನೀಡಲಿದ್ದು, ಶೀಘ್ರದಲ್ಲಿಯೇ ಅಧಿಕೃತವಾಗಿ ಜೆಡಿಎಸ್'ಗೆ ಸೇರ್ಪಡೆಯಾಗಲಿದ್ದಾರೆಂದು ಹೇಳಿದ್ದಾರೆ. 
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ಬಾರಿ ಗೆಲವು ಸಾಧಿಸಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ಸ್ಪರ್ಧೆಗಿಳಿಯುವುದಾಗಿ ಸಿದ್ದರಾಮಯ್ಯ ಅವರು ಹೇಳಿದ್ದರು. 
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧಿಸುವುದನ್ನು ಮುಂದುವರೆಸಿದರೂ, ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಸುಲಭವಾಗಿ ನಾವು ಬಿಟ್ಟುಕೊಡುವುದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಎಷ್ಟು ಹಣವನ್ನೇ ಖರ್ಚು ಮಾಡಲಿ, ಆದರೆ, ಗೆಲವು ಸಾಧಿಸುವುದು ಮಾತ್ರ ನಾವೇ. ಇದು ಖಚಿತ ಎಂದು ತಿಳಿಸಿದ್ದಾರೆ. 
ವಿಧಾನಸೌಧ ಅವ್ಯವಸ್ಥೆ ಕುರಿತು ಹೆಚ್.ಡಿ.ಕೆ ಆಕ್ರೋಶ
ಇದೇ ವೇಳೆ ವಜ್ರಮಹೋತ್ಸವದ ವೇಳೆ ವಿಧಾನಸೌಧ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಹೆಚ್.ಡಿ. ಕುಮಾರಸ್ವಾಮಿಯವರು, ಫೋಟೋ ಶೂಟ್ ವೇಳೆ ಪಕ್ಷದ ಶಾಸಕರಿಗೆ ಸ್ಥಳದ ವ್ಯವಸ್ಥೆ ಸರಿಯಾಗಿ ಮಾಡಿರಲಿಲ್ಲ. ಅಲ್ಲಿ ಮುಜುಗರಕ್ಕೊಳಗಾದರೂ ಅಸಭ್ಯವಾಗಿ ನಡೆದುಕೊಳ್ಳಬಾರದು ಎಂಬ ಉದ್ದೇಶದಿಂದ ಸ್ಥಳದಿಂದ ನಿರ್ಗಮಿಸಲಾಯಿತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. 
ನಾನು ರಾಜ್ಯ ಮಾಜಿ ಮುಖ್ಯಮಂತ್ರಿ... ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೊಂದಿಗಿನ ಫೋಟೋ ಶೂಟ್ ವೇಳೆ ಮುಂದಿನ ಆಸನದಲ್ಲಿ ಕುಳಿತಿರಬೇಕಿತ್ತು. ಆದರೆ, ನನಗೆ ಹಿಂದಿನ ಆಸನದಲ್ಲಿ ಕೂರಿಸಲಾಗಿತ್ತು. ಇದು ಪ್ರತಿಷ್ಠೆಯ ಪ್ರಶ್ನೆಯಲ್ಲ. ಹಿಂದಿನ ಆಸನದಲ್ಲಿ ಕುಳಿತುಕೊಳ್ಳುವಂತೆ ತಿಳಿಸಲಾಗಿತ್ತು. ಇದರಿಂದ ನನಗೆ ಕೋಪವಿಲ್ಲ. ಆದರೆ, ಕಾರ್ಯಕ್ರಮದ ವೇಳೆ ಸಾಕಷ್ಟು ಅವ್ಯವಸ್ಥೆಗಳಿದ್ದವು. 10 ನಿಮಿಷಗಳಲ್ಲಿ ಮುಗಿಯುವ ಕಾರ್ಯಕ್ರಮಕ್ಕೆ ಹೂವಿನ ಅಲಂಕಾರಕ್ಕೆ ಏಕೆ ರೂ.75 ಲಕ್ಷ ಖರ್ಚು ಮಾಡಬೇಕಿತ್ತು?...ಎಂದು ಪ್ರಶ್ನಿಸಿದ್ದಾರೆ. 
ಇದೇ ವೇಳೆ ಭಾಷಣದ ವೇಳೆ ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರ ಹೆಸರನ್ನು ಮರೆತಿರುವ ಕುರಿತಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com