ಬೆಂಗಳೂರು: ಡಿವೈಎಸ್ಪಿ ಎಂ.ಕೆ. ಗಣಪತಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್ ಕೂಡಲೇ ರಾಜೀನಾಮೆ ನೀಡುವಂತೆ ಬಿಜೆಪಿ ಒತ್ತಾಯಿಸಿದೆ.
ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಇಂದು ಬೆಂಗಳೂರು, ಕಾರವಾರ, ಮಡಿಕೇರಿ, ಬೀದರ್‌ಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಆನಂದ್ ರಾವ್ ಸರ್ಕಲ್‌ನ ಗಾಂಧಿ ಪ್ರತಿಮೆ ಬಳಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, "ಜಾರ್ಜ್ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ" ಎಂದರು.
"ಸೆ.26ರಿಂದ ಆನಂದರಾವ್ ಸರ್ಕಲ್‌ನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸುತ್ತೇವೆ. ಕೆಲವೇ ದಿನಗಳಲ್ಲಿ ಸಚಿವರ ಹಾಗೂ ವಿಶೇಷವಾಗಿ ಕೆಂಪಯ್ಯ ಅವರ ಹಗರಣ ಬಯಲು ಮಾಡುತ್ತೇವೆ" ಎಂದು ಯಡಿಯೂರಪ್ಪ ಹೇಳಿದರು.
ಸಭೆಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಆರ್. ಅಶೋಕ್, "ಸಚಿವ ಜಾರ್ಜ್ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯಬೇಕು" ಎಂದು ಆಗ್ರಹಿಸಿದ್ದಾರೆ.
ಸುಪ್ರೀಂಕೋರ್ಟ್ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಜಾರ್ಜ್ ಅವರನ್ನು ಸಹ ತನಿಖೆ ಮಾಡುವಂತೆ ಕೋರ್ಟ್ ಆದೇಶಿಸಿದೆ. ಆದಾಗ್ಯೂ ಸಚಿವ ಜಾರ್ಜ್ ರಾಜೀನಾಮೆ ನೀಡುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, "ಎಂ.ಕೆ.ಗಣಪತಿಯದ್ದು ಆತ್ಮಹತ್ಯೆಯಲ್ಲ, ಕೊಲೆ. ಇದರ ಹಿಂದಿರುವ ದುಷ್ಟ ಶಕ್ತಿಗಳ ಕೈವಾಡ ಬಹಿರಂಗವಾಗಬೇಕಿದೆ. ಸತ್ಯ ಬಹಿರಂಗ ಆಗಬೇಕಾದರೆ ಸಚಿವ ಜಾರ್ಜ್ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ" ಎಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಿಜೆಪಿ ಪಕ್ಷದ ಹಿರಿಯ ಮುಖಂಡರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು