ಮೈಸೂರು: ಒಂದು ವೇಳೆ ನೀವು ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದಂತೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಜೆಡಿಎಸ್‌ಗೆ ಮತ ಹಾಕಿದರೆ ಅದು ಕೋಮುವಾದಿ ಬಿಜೆಪಿಗೆ ಬೆಂಬಲ ನೀಡಿದಂತೆ ಎಂದು ಹೇಳಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ನಾವು ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಆತ್ಮ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ವಿಶ್ರಾಂತಿ ಹೆಸರಲ್ಲಿ ಬಂಡೀಪುರ ರೆಸಾರ್ಟ್‌ಗೆ ಹೋಗಿದ್ದ ಮುಖ್ಯಮಂತ್ರಿ ಹಣದ ಬಂಡಲ್ ಸಿದ್ಧ ಮಾಡುತ್ತಿದ್ದರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ತಾವು ಮಾಡಿದ್ದನ್ನು ನೆನಪಿಸಿಕೊಂಡು ಅವರು ಈ ರೀತಿಯ ಹೇಳಿಕೆ ಕೊಡುತ್ತಾರೆ ಟೀಕಿಸಿದ್ದಾರೆ.
ಅರ್ಕಾವತಿ ಭೂ ಹಗರಣ ಮತ್ತು ಹೂಬ್ಲೆಟ್ ವಾಚ್ ಸಂಬಂಧ ನನ್ನ ವಿರುದ್ಧ ಹಲವು ಬಾರಿ ದೂರು ನೀಡಲಾಗಿದೆ. ಇದರಲ್ಲಿ ಯಾವುದೇ ಹುರುಳಿಲ್ಲ. ಆದರೂ ಬಿಜೆಪಿಯವರು ವ್ಯವಸ್ಥಿತವಾಗಿ ಸುಳ್ಳು ಪ್ರಚಾರ ಮಾಡುತ್ತಾರೆ. ಇದಕ್ಕಾಗಿ ಅವರು ಸುಳ್ಳಿನ ಕಾರ್ಖಾನೆಯನ್ನೇ ತೆರೆದಿದ್ದಾರೆ ಎಂದರು.
ಇನ್ನೂ ಕಲಬುರಗಿಯಲ್ಲಿ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದಾರೆ, ಅವರ ಜೊತೆ ಮತ್ತೆ ಹಲವರು ಬಿಜೆಪಿ ಸೇರುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಈ ಸಂಬಂಧ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.