
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಪ್ತರಾಗಿರುವ ಮತ್ತು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಸಲಹೆಗಾರ ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ ವಿರುದ್ಧ ತನಿಖೆಗೆ ಚುನಾವಣಾ ಆಯೋಗ ಆದೇಶ ನೀಡಿದೆ.ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪೊಲೀಸ್ ವಾಹನದಲ್ಲಿ ಹಣವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ನೀಡಿದ ದೂರಿನ ಮೇರೆಗೆ ಚುನಾವಣಾ ಆಯೋಗ ತನಿಖೆಗೆ ಆದೇಶ ನೀಡಿದೆ.
ನಿನ್ನೆ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ಮುಖ್ಯ ಚುನಾವಣಾ ಆಯುಕ್ತ ಒ ಪಿ ರಾವತ್, ಮಾಜಿ ಪ್ರಧಾನಿ ದೇವೇಗೌಡರು ಸಲ್ಲಿಸಿದ ದೂರನ್ನು ಚುನಾವಣಾ ಆಯೋಗ ಪರಿಗಣಿಸಿದ್ದು ತನಿಖೆಗೆ ಆದೇಶಿಸಿದೆ. ಅಸಂವಿಧಾನಿಕವಾಗಿ ವರ್ತಿಸಲು ಚುನಾವಣಾ ಆಯೋಗ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಮೊನ್ನೆ ಗುರುವಾರ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ ದೇವೇಗೌಡ, ಕರ್ನಾಟಕದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯಲು ಅವಕಾಶ ಮಾಡಿಕೊಡಬೇಕೆಂದು ಮತ್ತು ಸರ್ಕಾರದ ಆಡಳಿತ ಯಂತ್ರವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದುರುಪಯೋಗಪಡಿಸುತ್ತಿದೆ. ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಲ್ಲದೆ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದರು.
ಮಾಜಿ ಪ್ರಧಾನಿ ದೇವೇಗೌಡ ಅವರು ಚುನಾವಣಾ ಆಯೋಗಕ್ಕೆ ಆರು ದೂರುಗಳನ್ನು ನೀಡಿದ್ದರು. ಅವುಗಳಲ್ಲೊಂದು ಪೊಲೀಸ್ ವಾಹನಗಳಲ್ಲಿ ಹಣವನ್ನು ಅಕ್ರಮವಾಗಿ ವರ್ಗಾಯಿಸುವುದಾಗಿದೆ.
Advertisement