ಕೊರಟಗೆರೆ: ಪರಮೇಶ್ವರ್ ಗೆ ಸಿಎಂ ಸಿದ್ದು ಪ್ರಚಾರ ಮತ್ತು ಹಿಂದಿನ ಸೋಲಿನ ಅನುಕಂಪದ ಅಲೆಯ ಬಲ!

ಹಿಂದಿನ ಚುನಾವಣೆಯ ಸೋಲು 2018ರ ಚುನಾವಣೆಯಲ್ಲಿ ಪರಮೇಶ್ವರ್ ಗೆ ಅನುಕಂಪದ ಅಲೆ ಸೃಷ್ಟಿಸಿದೆ....
ಪರಮೇಶ್ವರ್ ಮತ್ತು ಸುಧಾಕರ್ ಲಾಲ್
ಪರಮೇಶ್ವರ್ ಮತ್ತು ಸುಧಾಕರ್ ಲಾಲ್
ಕೊರಟಗೆರೆ: 2013ರ ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಜೆಡಿಎಸ್ ನ ಪಿ ಸುಧಾಕರ್ ಲಾಲ್ ವಿರುದ್ಧ 18 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಹಿಂದಿನ ಚುನಾವಣೆಯ ಸೋಲು 2018ರ ಚುನಾವಣೆಯಲ್ಲಿ ಪರಮೇಶ್ವರ್ ಗೆ ಅನುಕಂಪದ ಅಲೆ ಸೃಷ್ಟಿಸಿದೆ.
2018ರ ಮೇ ತಿಂಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ತ್ರಿಕೋನ ಹೋರಾಟ ನಡೆಯುತ್ತಿದೆ. ಬಿಜೆಪಿ ಕೂಡ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರಿಂದ ಮತಗಳ ವಿಭಜನೆಯಾಗಲಿದ್ದು, ಪರಮೇಶ್ವರ್ ಗೆ ಸಹಾಯವಾಗಲಿದೆ.
ಮಾಜಿ ಗೃಹಸಚಿವ ಪರಮೇಶ್ವರ್ ಪಕ್ಷದಲ್ಲಿ ಈಗ ಹೆಚ್ಚಿನ ಸ್ನೇಹಿತರನ್ನು ಹೊಂದಿದ್ದಾರೆ, ಕಳೆದ ಬಾರಿಯ ಚುನಾವಣೆಯಲ್ಲಿ  ಪರಮೇಶ್ವರ್ ಪರ ಸಿಎಂ ಸಿದ್ದರಾಮಯ್ಯ ಕೊರಟಗೆರೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿರಲಿಲ್ಲ, ಆದರೆ ಈ ಬಾರಿ ಮಾರ್ಚ್ 11 ರಂದು ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಿದ್ದರು, ಈ ಭಾಗದಲ್ಲಿರುವ ಕುರುಬ ಸಮುದಾಯದ ಜನರು ಪರಮೇಶ್ವರ್ ಗೆ ತಮ್ಮ ಬಹಿರಂಗ ಬೆಂಬಲ ಘೋಷಿಸಿದ್ದಾರೆ.
ಪರಮೇಶ್ವರ್ ಕಾಲೇಜು ಸ್ನೇಹಿತ ಮಧುಗಿರಿ ಶಾಸಕ ಕೆ,ಎನ್ ರಾಜಣ್ಣ ಕೂಡ ಪ್ರಚಾರ ಮಾಡುವುದರಿಂದ ಎಸ್ ಟಿ ನಾಯಕ ಸಮುದಾಯದ ಮತಗಳು ಪರಮೇಶ್ವರ್ ಪಾಲಾಗಲಿವೆ.ಈ ಬಾರಿ ಪರಮೇಶ್ವರ್ ಗೆ ತ್ರಿಕೋನ ಸ್ಪರ್ದೆ ಏರ್ಪಡಲಿದೆ, ಬಿಜೆಪಿಯಿಂದ ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಚ್ ಹನುಮಂತಯ್ಯ ಅಥವಾ ಮಾಜಿ ಶಾಸಕ ಗಂಗಹನುಮಯ್ಯ ಕಣಕ್ಕಿಳಿಯಲಿದ್ದಾರೆ. 
2013 ರ ಚುನಾವಣೆಯಲ್ಲಿ ಜೆಡಿಎಸ್ ನ ಸುಧಾಕರ್ ಲಾಲ್ ಮತ್ತು ಪರಮೇಶ್ವರ್ ನಡುವೆ ನೇರ ಸ್ಪರ್ದೆ ಏರ್ಪಟ್ಟಿತ್ತು, 2008 ರಲ್ಲಿ ನಡೆದ ಚುನಾವಣೆಯಲ್ಲಿ ತ್ರಿಕೋನ ಸ್ಪರ್ದೆಯಿದ್ದರೂ ಪರಮೇಶ್ವರ್ ಜಯ ಗಳಿಸಿದ್ದರು ಎಂದು ರಾಜಕೀಯ ವಿಶ್ಲೇಷಕ ಪುಟ್ಟಲಿಂಗಯ್ಯ ಅಭಿಪ್ರಾಯ ಪಟ್ಟಿದ್ದಾರೆ.
2013 ರಲ್ಲಿ ಬಿಜೆಪಿ ಅಭ್ಯರ್ಥಿ ಪ್ರಬಲ ಪೈಪೋಟಿ ನೀಡಿರಲಿಲ್ಲ, ಕೇವಲ 3,500 ಮತ ಪಡೆದಿದ್ರು,ಜೆಡಿಎಸ್ ನ ಸುಧಾಕರ್ ಲಾಲ್ 72,229 ಮತ ಪಡೆದಿದ್ದರು, ಪರಮೇಶ್ವರ್ ಗೆ 54,074 ಮತಗಳು ಬಿದ್ದಿದ್ದವು, 2008 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪರಮೇಶ್ವರ್ ಪರ 49,276 ಮತಗಳು ಚಲಾವಣೆಯಾಗಿದ್ದವು,  ಜೆಡಿಎಸ್ ನ ವಾಲೇ ಚಂದ್ರುಗೆ  37,719 ಹಾಗೂ ಬಿಜೆಪಿಯ ಗಂಗ ಹನುಮಯ್ಯಗೆ 33 ಸಾವಿರ ಮತಗಳು ದೊರಕಿದ್ದವು.
ಈಗ ಕಾಂಗ್ರೆಸ್ ಸೇರಿರುವ ವಾಲೇಚಂದ್ರು ಪರಮೇಶ್ವರ್ ಪರ ಪ್ರಚಾರ ನಡೆಸಲಿದ್ದಾರೆ. ಇದರಿಂದ ಎಸ್ ಸಿ ಸಮುದಾಯದ ಮತಗಳು ಪರಮೇಶ್ವರ್ ಗೆ ಸಿಗಲಿವೆ, ನಾವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾ ಬಂದಿದ್ದೇವೆ, ಈ ಬಾರಿ ವಾಲೇ ಚಂದ್ರು ಯಾರಿಗೆ ಹೇಳುತ್ತಾರೋ ಅವರಿಗೆ ಮತ ಹಾಕುವುದಾಗಿ ಬಿಕ್ಕೆಗುಡ್ಡ ಗ್ರಾಮಸ್ಥರು ತಿಳಿಸಿದ್ದಾರೆ.
ಇದೆಲ್ಲಾ ಮೇಲ್ನೋಟಕ್ಕೆ ಚೆನ್ನಾಗಿ ಕಾಣುತ್ತಿದೆ, ಪರಮೇಶ್ವರ್ ಗೆ ಸ್ನೇಹಿತರು ಹೆಚ್ಚಿದಂತೆ ಶತೃಗಳು ಕೂಡ ಹೆಚ್ಚಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಜಿ.ಎಸ್ ಬಸವರಾಜು ಜಿಲ್ಲೆಯಲ್ಲಿ ಫ್ರಬಾವಿ ವ್ಯಕ್ತಿಯಾಗಿದ್ದು, ಬಿಜೆಪಿ ಅಭ್ಯರ್ಥಿಯಾಗಲಿರುವ ಗಂಗಹನುಮಯ್ಯ ಅವರಿಗೆ ಸಹಾಯ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ, 
ಹಾಲಿ ಶಾಸಕ ಸುಧಾಕರ್ ಲಾಲ್  ವಿರುದ್ಧ ಅಲ್ಲಿನ ಜನ ಅಸಮಾಧಾನ ಗೊಂಡಿದ್ದಾರೆ, ಸುಧಾಕರ್ ಅವಧಿಯಲ್ಲಿ ಯಾವುದೇ ದೊಡ್ಡ ಮಟ್ಟದ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ,  ಕಾಂಕ್ರೀಟ್ ರಸ್ತೆ ಅರ್ಧಕ್ಕೆ ನಿಂತಿದೆ ಮಳವಳ್ಳಿ ಮತ್ತು ಪಾವಗಡ ನಡುವಿನ ರಾಜ್ಯ ಹೆದ್ದಾರಿ ಯೋಜನೆ ಅಂತಿಮ ಹಂತಕ್ಕೆ ಬಂದು ನಿಂತಿದೆ. ತಮ್ಮ ಕ್ಷೇತ್ರವನ್ನು ಯಾವತ್ತೂ ನಿರ್ಲಕ್ಷ್ಯ ಮಾಡಿಲ್ಲ ಎಂದು ಸುಧಾಕರ್ ಲಾಲ್ ಹೇಳಿದ್ದಾರೆ, ಕಳೆದ 18 ವರ್ಷಗಳಿಂದ ಕೊರಟಗೆರೆಗಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ, 13 ವರ್ಷ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಅಲ್ಲಿನ ಜನರ ದೂರುಗಳಿಗೆ ಸ್ಪಂದಿಸಿದ್ದೇನೆ, ಅಲ್ಲಿನ ಜನ ನನ್ನನ್ನು ಮನೆ ಮಗನಂತೆ ನೋಡಿಕೊಂಡಿದ್ದಾರೆ, ಅಭಿವೃದ್ಧಿ ಗಾಗಿ ನನ್ನ ಕೈಯ್ಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನಿಸಿದ್ದೇನೆ ಎಂದು ಹೇಳಿದ್ದಾರೆ, ಇನ್ನೂ ಲಾಲ್ ಅಸಹಾಯಕತೆ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ  ಈ ಕ್ಷೇತ್ರಕ್ಕೆ ಅಗತ್ಯವಾದ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ. 
ಸದಾಶಿವ ಆಯೋಗ ದ ವರದಿಯನ್ನುಅನುಷ್ಠಾನಗೊಳಿಸದಿರುವುದರ ಬಗ್ಗೆ ಈ ಭಾಗದ ಜನತೆಗೆ ಪರಮೇಶ್ವರ್ ಬಗ್ಗೆ ಅಸಮಾಧಾನವಿದೆ.ಇನ್ನೂ 2013 ರಲ್ಲಿ ಮಾಡಿದ್ದ ತಪ್ಪುಗಳನ್ನು ಸರಿಪಡಿಸಿಕೊಂಡಿರುವ ಪರಮೇಶ್ವರ್ ಅವರಿಗೆ ಕೊರಟಗೆರೆ ಜನತೆ ವಿಜಯಮಾಲೆ ಹಾಕಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com