ವಿಧಾನಸಭೆ ಚುನಾವಣೆ: ಆಟೋ ಚಾಲಕರ ಮನವೊಲಿಸಲು ರಾಜಕೀಯ ಪಕ್ಷಗಳ ಕಸರತ್ತು

ಸಿನಿಮಾ ಮಂದಿಗೂ ಆಟೋಗೂ ಹಿಂದಿನಿಂದಲೂ ಅವಿನಾಭಾವ ಸಂಬಂಧ. ಅದೀಗ ...
ಆಟೋದಲ್ಲಿ ಸವಾರಿ ನಡೆಸಿದ ಬಿ.ಎಸ್.ಯಡಿಯೂರಪ್ಪ, ಪಿ.ಸಿ.ಮೋಹನ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು
ಆಟೋದಲ್ಲಿ ಸವಾರಿ ನಡೆಸಿದ ಬಿ.ಎಸ್.ಯಡಿಯೂರಪ್ಪ, ಪಿ.ಸಿ.ಮೋಹನ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು

ಬೆಂಗಳೂರು: ಸಿನಿಮಾ ಮಂದಿಗೂ ಆಟೋಗೂ ಹಿಂದಿನಿಂದಲೂ ಅವಿನಾಭಾವ ಸಂಬಂಧ. ಅದೀಗ ರಾಜಕೀಯದವರನ್ನೂ ಅಂಟಿಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿನ್ನೆ ತಮ್ಮ ಡಾಲರ್ಸ್ ಕಾಲನಿಯ ನಿವಾಸದಿಂದ ಸಂಸದ ಪಿ.ಸಿ.ಮೋಹನ್ ಮತ್ತು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರೊಂದಿಗೆ ಆಟೋದಲ್ಲಿ ಜಸ್ಮಾ ಭವನಕ್ಕೆ ಸಂಚರಿಸಿದರು. ಅಲ್ಲಿ ಬಿಜೆಪಿ ನಾಯಕರು ಮತ್ತು ಆಟೋ ಚಾಲಕರೊಂದಿಗೆ ನಿನ್ನೆ ಸಂವಾದ ಏರ್ಪಡಿಸಲಾಗಿತ್ತು.

ಇನ್ನು ಕೆಲವೇ ವಾರಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಅನೇಕ ರಾಜಕೀಯ ನಾಯಕರು ಈ ರೀತಿ ಆಟೋ ಚಾಲಕರು ಮತ್ತು ಅವರ ಕುಟುಂಬದವರನ್ನು ಓಲೈಸಲು ಮುಂದಾಗಿದ್ದಾರೆ.

 ರಾಜ್ಯದಲ್ಲಿ ಆಟೋ ಚಾಲಕರ ಒಂದು ವರ್ಗವೇ ಇದ್ದು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಕರ್ನಾಟಕದಲ್ಲಿ ಸುಮಾರು 5 ಲಕ್ಷ ಆಟೋ ಚಾಲಕರಿದ್ದು ಬೆಂಗಳೂರು ನಗರವೊಂದರಲ್ಲಿಯೇ 1.25 ಲಕ್ಷ ಆಟೋ ಚಾಲಕರಿದ್ದಾರೆ. ಅವರ ಕುಟುಂಬ ವರ್ಗದವರನ್ನು ಸೇರಿಸಿದರೆ ಸುಮಾರು 20 ಲಕ್ಷ ಆಟೋ ಚಾಲಕ ಮತದಾರರು ಮತ ಚಲಾಯಿಸಲಿದ್ದಾರೆ.

ರಾಜಕೀಯ ಪಕ್ಷಗಳೊಂದಿಗೆ ಬೆರೆತಿರುವ ಹಲವು ಆಟೋ ಚಾಲಕ ಒಕ್ಕೂಟಗಳಿವೆ. ಯಾವುದೇ ಒಕ್ಕೂಟಕ್ಕೆ ಸೇರದಿರುವ ಆಟೋ ಚಾಲಕರು ತಮ್ಮ ನಿಷ್ಠೆಯನ್ನು ಬದಲಾಯಿಸುತ್ತಿರುತ್ತಾರೆ.

ಬೆಂಗಳೂರಿನ ಆದರ್ಶ ಆಟೋ ರಿಕ್ಷಾ ಚಾಲಕರ ಒಕ್ಕೂಟದಲ್ಲಿ 16,000 ಸದಸ್ಯರಿದ್ದು ಇದರ ಅಧ್ಯಕ್ಷರು ಮಂಜುನಾಥ್ ಆಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ತಮ್ಮ ನಿಷ್ಠೆಯನ್ನು ಜೆಡಿಎಸ್ ನಿಂದ ಬಿಜೆಪಿಗೆ ಬದಲಾಯಿಸಲು ಯೋಚಿಸುತ್ತಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಅಸಂಘಟಿಕ ಆಟೋ ನಿಲ್ದಾಣಗಳ ಸಮೀಕ್ಷೆ ನಡೆಸಿ ಆಟೋ ಚಾಲಕರು ಮತ್ತು ಅವರ ಕುಟುಂಬ ವರ್ಗದ ಮತದಾರರ ಬಗ್ಗೆ ತಿಳಿಯಲಾಗುವುದು ಎನ್ನುತ್ತಾರೆ ಮಂಜುನಾಥ್.

ರಾಜಕೀಯ ನೇತಾರರ ಭರವಸೆ
:ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ಆಟೋ ರಿಕ್ಷಾ ಚಾಲಕರಿಗೆ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗುವುದು ಎಂದು ಇತ್ತೀಚೆಗೆ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದರು. ಈ ವಿಷಯದಲ್ಲಿ ಜೆಡಿಎಸ್ ಕೂಡ ಹಿಂದೆ ಬಿದ್ದಿಲ್ಲ. ತಾವು ಅಧಿಕಾರಕ್ಕೆ ಬಂದರೆ ಆಟೋ ಚಾಲಕರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುತ್ತೇವೆ ಎಂದು ಇತ್ತೀಚೆಗೆ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದರು. ಓಲಾ ಮತ್ತು ಉಬರ್ ನಂತೆ ಬೆಂಗಳೂರಿನಲ್ಲಿ ಆಟೋ ಚಾಲಕರಿಗೆ ಪ್ರತ್ಯೇಕ ಆಪ್ ಆಧಾರಿತ ಸೇವೆ ಒದಗಿಸಲಾಗುವುದು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com