ಬಿಜೆಪಿ ಮೊದಲ ಪಟ್ಟಿಯಲ್ಲಿ ವಲಸಿಗರಿಗೆ ಆದ್ಯತೆ: ರಾಯಣ್ಣ ಬ್ರಿಗೇಡ್ ನಲ್ಲಿದ್ದ ಈಶ್ವರಪ್ಪ ಆಪ್ತರಿಗಿಲ್ಲ ಟಿಕೆಟ್

ವಿಧಾನಸಭಾ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳ ಪಟ್ಟಿ ಘೋಷಿಸುತ್ತಿದ್ದಂತೆಯೇ, ಟಿಕೆಟ್‌ ವಂಚಿತರು ಬಂಡಾಯದ ಬಾವುಟ ಹಾರಿಸಿದ್ದಾರೆ..
ಕೆ.ಎಸ್ ಈಶ್ವರಪ್ಪ
ಕೆ.ಎಸ್ ಈಶ್ವರಪ್ಪ
ಬೆಂಗಳೂರು: ವಿಧಾನಸಭಾ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳ ಪಟ್ಟಿ ಘೋಷಿಸುತ್ತಿದ್ದಂತೆಯೇ, ಟಿಕೆಟ್‌ ವಂಚಿತರು ಬಂಡಾಯದ ಬಾವುಟ ಹಾರಿಸಿದ್ದಾರೆ. ಇತರೆ ಕ್ಷೇತ್ರಗಳಲ್ಲೂ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಅವಕಾಶ ಸಿಗದವರು ಪಕ್ಷದ ವಿರುದ್ಧ ಸಿಡಿದೇಳುವ ಸಾಧ್ಯತೆಗಳಿವೆ. 
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಶಿವಮೊಗ್ಗ ನಗರ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಅವರಿ ಆಸೆಗೆ ಹೈಕಮಾಂಡ್ ಅಸ್ತು ಎಂದಿದೆ. ಆದರೆ ಈಶ್ವರಪ್ಪ ಜೊತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಲ್ಲಿ ಗುರುತಿಸಿಕೊಂಡಿದ್ದ ಹಲವರಿಗೆ ನಿರಾಸೆಯಾಗಿದೆ, 
11 ಮಂದಿ ವಲಸಿಗರಿಗೆ ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಿದೆ. ಅಪ್ಜಲಪುರ- ಮಾಲೀಕಯಯ್ಯ ಗುತ್ತೇದಾರ್, ಮುದ್ದೆಬಿಹಾಳ- ಎಎಸ್ ಪಾಟೀಲ್ ನಡಹಳ್ಳಿ, ಬಸವಕಲ್ಯಾಣ-ಮಲ್ಲಿಕಾರ್ಜುನ ಖೂಬಾ, ಲಿಂಗಸಗೂರು-ಮಾನಪ್ಪ ವಜ್ಜಲ್, ರಾಯಚೂರು- ಶಿವರಾಜ ಪಾಟೀಲ್, ವಿಜಯನಗರ- ಗವಿಯಪ್ಪ, ಹೊಸದುರ್ಗ- ಗೂಳಿಹಟ್ಟಿ ಶೇಖರ್, ಚನ್ನಪಟ್ಟಣ- ಸಿ.ಪಿ ಯೋಗೇಶ್ವರ್, ಶ್ರೀರಂಗಪಟ್ಟಣ- ನಂಜುಂಡೇಗೌಡ, ವಿಜಯಪುರ ನಗರ- ಬಸನಗೌಡ ಪಾಟೀಲ್ ಯತ್ನಾಳ್,  ಕುಂದಾಪುರ-ಹಾಲಾಡಿ ಶ್ರೀನಿವಾಸ ಶೆಟ್ಟಿ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಲ್ಲಿ ಗುರುತಿಸಿಕೊಂಡಿದ್ದ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೆ ಟಿಕೆಟ್ ಸಿಗದಿರುವುದರಿಂದ ಹಲವರು ಬಂಡಾಯ ಏಳುವ ಸಾಧ್ಯತೆಗಳಿವೆ.
ಎಂಎಲ್ ಸಿ ಸೋಮಣ್ಣ ಬೇವಿನ ಮರದ್ ಶಿಗ್ಗಾವ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ದಿಸಲು ಬಯಸಿದ್ದರು, ಆದರೆ ಪಕ್ಷ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಲಾಗಿದೆ, ಶಿವಾಜಿನಗರ ವಿಧಾನಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ನಿರ್ಮಲ್ ಕುಮಾರ್ ಸುರಾನಾ ಅವರಿಗೆ ನಿರಾಸೆಯಾಗಿದೆ, ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೂ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆಯಿದೆ, ಮಾಜಿ ಸಚಿವ ಸೊಗಡು ಶಿವಣ್ಣ ಕೂಡ ತುಮಕೂರು ನಗರದಿಂದ ಸ್ಪರ್ದಿಸಲು ಇಚ್ಚಿಸಿದ್ದಾರೆ.
ಇನ್ನೂ ಮೊದಲ ಪಟ್ಟಿಯಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೆಸರು ಸೇರಿಲ್ಲ, ವಿಜಯೇಂದ್ರ ಅವರನ್ನು ಸಿಎಂ ಸಿದ್ದರಾಮಯ್ಯ ಪುತ್ರ ಡಾ, ಯತೀಂದ್ರ ವಿರುದ್ಧ ವರುಣಾ ಕ್ಷೇತ್ರದಿಂದ ಕಣಕ್ಕಿಳಿಸಲು ಎಲ್ಲಾ ತಯಾರಿ ನಡೆದಿದೆ, ಹೀಗಾಗಿ ಎರಡನೇ ಪಟ್ಟಿಯಲ್ಲಿ ವಿಜಯೇಂದ್ರ ಹೆಸರನ್ನು ನಿರೀಕ್ಷಿಸಲಾಗಿದೆ.
ಮಾಜಿ ಸಚಿವ ಬಚ್ಚೆಗೌಡ ತಮ್ಮ ಪುತ್ರ ಶರತ್ ಗೆ ಹೊಸಕೋಟೆ ಕ್ಷೇತ್ರದ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ, ಕೆಜಿಎಫ್ ನಿಂದ ಸಂಪಂಗಿ ಗೆ ಟಿಕೆಟ್ ನೀಡಲಾಗಿದೆ,  ಕಾರವಾರದಿಂದ ರೂಪಾಲಿ ನಾಯಕ್, ನಿಪ್ಪಾಣಿಯಿಂದ ಶಶಿಕಲಾ ಜೊಲ್ಲೆ, ಹಿರಿಯೂರಿನಿಂದ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಟಿಕೆಟ್ ದೊರಕಿದೆ,
ಯಡಿಯೂರಪ್ಪ ಹಾಗೂ ಶ್ರೀರಾಮುಲು ಹೊರತು ಪಡಿಸಿದರೇ ಮತ್ಯಾವ ಸಂಸದರಿಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ಸೂಚಿಸಿದೆ, ಹಾಲಿ ಬಿಜೆಪಿ ಸಂಸದರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ ಎಂದು ಹೇಳಿರುವ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಊಹಾ ಪೋಹಗಳಿಗೆ ತೆರೆ ಎಳೆದಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಸಿಗುವ ಆತ್ಮವಿಶ್ವಾಸದಲ್ಲಿದ್ದವರು ಮೊದಲ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ತಮ್ಮ ನಾಯಕರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಇದು ಬಿಜೆಪಿ ವರಿಷ್ಠರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಕೈ ತಪ್ಪಿದ್ದಕ್ಕೆ ಬಿಬಿಎಂಪಿಯ ಮಾಜಿ ಕಾರ್ಪೋರೇಟರ್‌, ಬಿಜೆಪಿ ನಗರ ಮತ್ತು ನಗರ ಜಿಲ್ಲೆ ವಕ್ತಾರ ಎನ್‌.ಆರ್‌.ರಮೇಶ್‌ ಅವರು ಕೇಂದ್ರ ಸಚಿವ ಅನಂತಕುಮಾರ್‌ ಮತ್ತು ಮಾಜಿ ಸಚಿವ ಆರ್‌.ಅಶೋಕ್‌ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ವಕ್ತಾರರ ಸ್ಥಾನಕ್ಕೆ ರಾಜೀನಾಮೆ ನೀಡಿ, ವರಿಷ್ಠರಿಗೆ 48 ತಾಸು ಗಡುವು ನೀಡಿದ್ದಾರೆ.
ಅದೇ ರೀತಿ ಶಿಗ್ಗಾವ್ ಕ್ಷೇತ್ರದ ಸೋಮಣ್ಣ ಬೇವಿನ ಮರದ್ ಕೂಡ ತಮ್ಮ ಅತೃಪ್ತಿ ಹೊರ ಹಾಕಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com