ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಟಿಕೆಟ್ ಸಿಗದ್ದಕ್ಕೆ ಕಾಂಗ್ರೆಸ್'ನಲ್ಲಿ ಮೊಳಗಿದ ಬಂಡಾಯದ ಕಹಳೆ: ಭಿನ್ನಾಭಿಪ್ರಾಯ ಶಮನಕ್ಕೆ 4 ತಂಡ ರಚನೆ

ರಾಜ್ಯದ 224 ವಿಧಾನಸಭಾಕ್ಷೇತ್ರಗಳ ಪೈಕಿ 218 ಕ್ಷೇತ್ರಗಳ ಟಿಕೆಟ್ ಅನ್ನು ಭಾನುವಾರ ಘೋಷಣೆ ಮಾಡಿದ ಕಾಂಗ್ರೆಸ್'ಗೆ ದಿನಕಳೆಯುವುದರೊಳಗೆ ವ್ಯಾಪಕ ಬಂಡಾಯದ ಬಿಸಿ ತಟ್ಟಿದೆ...
ಬೆಂಗಳೂರು; ರಾಜ್ಯದ 224 ವಿಧಾನಸಭಾಕ್ಷೇತ್ರಗಳ ಪೈಕಿ 218 ಕ್ಷೇತ್ರಗಳ ಟಿಕೆಟ್ ಅನ್ನು ಭಾನುವಾರ ಘೋಷಣೆ ಮಾಡಿದ ಕಾಂಗ್ರೆಸ್'ಗೆ ದಿನಕಳೆಯುವುದರೊಳಗೆ ವ್ಯಾಪಕ ಬಂಡಾಯದ ಬಿಸಿ ತಟ್ಟಿದೆ. 
ರಾಜ್ಯದ 50ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಅಸಮಾಧಾನದ ಅಲೆ ಎದ್ದಿದ್ದು, ಈಗಾಗಲೇ ಟಿಕೆಟ್ ವಂಚಿತ ಶಾಸಕ ತರೀಕರೆಯ ಶ್ರೀನಿವಾಸ್ ಸೇರಿ ನಾಲ್ವರು ಅಭ್ಯರ್ಥಿಗಳು ಬಂಡಾಯದ ಕಹಳೆ ಮೊಳಗಿಸಿ ಚುನಾವಣಾ ಕಣಕ್ಕೆ ಇಳಿಯುವುದಾಗಿ ಘೋಷಣೆ ಮಾಡಿದ್ದಾರೆ. 
ಹಲವೆಡೆ ಭಿನ್ನಮತ ಸ್ಫೋಟಗೊಂಡಿದ್ದು, ಶಾಸಕ ಷಡಕ್ಷರಿ ಅವರಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ತಿಪಟೂರ್ ಬಂದ್ ನಡೆಸಲಾಗಿದೆ. ಇದೇ ವೇಳೆ ಮುಧೋಳ, ಬಾಗಲಕೋಟೆ, ಚಿಕ್ಕಮಗಳೂರು, ಸಿರಗುಪ್ಪ, ಲಿಂಗಸ್ಗೂರು, ಕಡೂರು ಸೇರಿದಂತೆ ಹಲವೆಡೆ ಟಿಕೆಟ್ ವಂಚಿತರ ಬೆಂಬಲಿಗರು ಬೀದಿಗಳಿದು ಪ್ರತಿಭಟನೆ ನಡೆಸಿ ಹೈಕಮಾಂಡ್ ವಿರುದ್ಧ ಟಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. 
ಟಿಕೆಟ್ ಕೈ ತಪ್ಪಿದ್ದಕ್ಕೆ ಹಲವು ಮಾಜಿ ಶಾಸಕರು ಕಣ್ಣಿರು ಹಾಕಿದ ಘಟನೆಗಳೂ ಕೂಡ ನಡೆದವರು. ತರೀಕೆರೆಯಲ್ಲಿ ಎಸ್.ಎಂ.ನಾಗರಾಜ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಶಾಸಕ ಶ್ರೀನಿವಾಸ್ ಪಕ್ಷೇತರರಾಗಿ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. 
ಮಂಡ್ಯದಲ್ಲಿ ಅಂಬರೀಷ್ ಅವರಿಗೆ ಟಿಕೆಟ್ ನೀಡಿದ್ದಕ್ಕೆ, ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ ಟಿಕೆಟ್ ಆಕಾಂಕ್ಷಿ ರವಿಕುಮಾರ್ ಬೆಂಬಲಿಗರು ಪಕ್ಷದ ಕಚೇರಿ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು. ನೆಲಮಂಗಲದ ಶಾಸಕ ಅಂಜನಮೂರ್ತಿಯವರ ಬೆಂಬಲಿಗರು ಗಂಟೆಗಟ್ಟಲೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಇನ್ನು ಕೋಲಾರದಲ್ಲಿಯೂ ಪ್ರತಿಭಟನೆ ನಡೆಸಿದ್ದು, ಜಮೀರ್ ಪಾಶಾ ಅವರನ್ನು ಬದಲಿಸುವಂತೆ ಪ್ರತಿಭಟನೆ ನಡೆಸಿದರು. 
ಬೆಂಗಳೂರಿನ ರಾಜಾಜಿನಗರದಲ್ಲಿ ಮಂಜುಳ ನಾಯ್ಡು ಹಾಗೂ ಅವರ ಬೆಂಬಲಿಗರು ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಹಲವು ವರ್ಷಗಳಿಂದಲೂ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಪ್ರಾಮಾಣಿಕತೆಗೆ ಬೆಲೆಯಿಲ್ಲ ಎಂದು ಹೇಳಿದ್ದಾರೆ. 
ಪಕ್ಷದಲ್ಲಿ ಎದುರಾಗಿರುವ ಭಿನ್ನಾಭಿಪ್ರಾಯಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು, ಭಿನ್ನಾಭಿಪ್ರಾಯ ಶಮನಕ್ಕಾಗಿ ಈಗಾಗಲೇ ನಾಲ್ಕು ತಂಡಗಳನ್ನು ರಚನೆ ಮಡಾಲಾಗಿದೆ ಎಂದು ಹೇಳಿದ್ದಾರೆ. 
ಪ್ರತೀಯೊಂದು ಕ್ಷೇತ್ರದಲ್ಲಿಯೂ ಹಲವಾರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಆದರೆ, ಒಬ್ಬರಿಗೆ ಮಾತ್ರ ಟಿಕೆಟ್ ನೀಡಲು ಸಾಧ್ಯ. ಇದರಿಂದ ಇತರರಿಗೆ ಬೇಸರವಾಗುತ್ತದೆ. ಹೀಗಾಗಿ ಮತ್ತೆ ಐದು ವರ್ಷಗ ಕಾಯಬೇಕೆಂದು ಉಳಿದವರಿಗೆ ಬೇಸರವಾಗುವುದು ಸಾಮಾನ್ಯ. ಪ್ರಸ್ತುತ ಎದ್ದಿರುವ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವ ವಿಶ್ವಾಸ ನಮಗಿದೆ ಎಂದು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com