ಕರ್ನಾಟಕ ವಿಧಾನಸಭಾ ಚುನಾವಣೆ; ನಮ್ಮ ಮತಕ್ಕೂ ಮೌಲ್ಯವಿದೆ: ತೃತೀಯಲಿಂಗಿಗಳು

ತೃತೀಯ ಲಿಂಗಿಗಳಿಗೆ ಮತದಾನದ ಹಕ್ಕು ನೀಡಿ ಹಲವು ವರ್ಷಗಳಾದರೂ ಮತದಾನ ಮಾಡಲು ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿತ್ತು. ಈ ಬಾರಿ ಚುನಾವಣಾ ಆಯೋಗ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಮತದಾನ ಗುರುತಿನ ಚೀಟಿಗಳನ್ನು...
ಅಕ್ಕೈ ಪದ್ಮಶಾಲಿ
ಅಕ್ಕೈ ಪದ್ಮಶಾಲಿ
ಬೆಂಗಳೂರು: ತೃತೀಯ ಲಿಂಗಿಗಳಿಗೆ ಮತದಾನದ ಹಕ್ಕು ನೀಡಿ ಹಲವು ವರ್ಷಗಳಾದರೂ ಮತದಾನ ಮಾಡಲು ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿತ್ತು. ಈ ಬಾರಿ ಚುನಾವಣಾ ಆಯೋಗ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಮತದಾನ ಗುರುತಿನ ಚೀಟಿಗಳನ್ನು ಪಡೆದುಕೊಂಡಿರುವ ತೃತೀಯ ಲಿಂಗಿಗಳು ಮತದಾನ ಮಾಡಲು ಉತ್ಸುಕರಾಗಿದ್ದಾರೆ. 
2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಒಟ್ಟು ತೃತೀಯ ಲಿಂಗಿ ಮತದಾರರ ಸಂಖ್ಯೆ 2,100 ಇತ್ತು. ಅದರಲ್ಲಿ ಮತ ಹಾಕಿದವರು 49 ಮಂದಿ ಮಾತ್ರ. ಅಂದರೆ ಮತದಾನ ಪ್ರಮಾಣ ಶೇ.2 ರಷ್ಟು ಮಾತ್ರ ಆಗಿತ್ತು. ಕಳೆದ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಒಬ್ಬರು ಲೈಂಗಿಕ ಅಲ್ಪಸಂಖ್ಯಾತ ಅಭ್ಯರ್ಥಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದರು. ಈ ಬಾರಿ ಮತದಾರರ ಸಂಖ್ಯೆ ಎರಡರಷ್ಟಾಗಿದೆ. ಅದಕ್ಕೆ ತಕ್ಕಂತೆ ಮತದಾನ ಪ್ರಮಾಣ ಕೂಡ ಹೆಚ್ಚಾಗಬೇಕು ಎಂದು ಲೈಂಗಿಕ ಅಲ್ಪಸಂಖ್ಯಾತರ ಸಂಘ-ಸಂಸ್ಥೆಗಳು ಉದ್ದೇಶವಾಗಿದೆ. 
2018ರ ಫೆಬ್ರವರಿಯಲ್ಲಿ ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿ ಪ್ರಕಾರ ರಾಜ್ಯದಲ್ಲಿ 4,552 ತೃತೀಯ ಲಿಂಗಿ ಮತದಾರರಿದ್ದಾರೆ. ಒಟ್ಟು ಸಂಖ್ಯೆ ಇರುವುದು 1 ಲಕ್ಷ. ಆದರೆ, ಇತರೆ ರಾಜ್ಯಗಳಿಂದ ಬಂದವರಿಗೆ ಮತದಾರರ ಪಟ್ಟಿಯಲ್ಲಿ ಹೆಸಲು ಸೇರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಚುನಾವಣಾ ಆಯೋಗ ಅವರಿಗೆ ಹೆಸರನ್ನು ಸೇರ್ಪಡೆಗೊಳಿಸಲು ಒಪ್ಪುತ್ತಿಲ್ಲ. ರಾಜಕೀಯ ಪಕ್ಷಗಳೂ ಕೂಡ ನಮಗೆ ಯಾವುದೇ ರೀತಿಯ ಸಹಾಯವನ್ನೂ ಮಾಡುತ್ತಿಲ್ಲ ಎಂದು ಅಕ್ಕೈ ಪದ್ಮಶಾಲಿಯವರು ಹೇಳಿದ್ದಾರೆ. 
ಮತದಾರರ ಪಟ್ಟಿಯಲ್ಲಿ ಈಗಾಗಲೇ ನನ್ನ ಹೆಸರನ್ನು ಸೇರ್ಪಡೆಗೊಳಿಸಿದ್ದೇನೆ. ಆದರೆ, ಈ ವರೆಗೂ ಗುರುತಿನ ಚೀಟಿ ಬಂದಿಲ್ಲ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಯಸ್ಕನಾಗಿ 16 ವರ್ಷವಾದ ಬಳಿಕ ನಾನು ಮತದಾನ ಮಾಡುವ ಹಕ್ಕನ್ನು ಪಡೆಯುತ್ತಿದ್ದೇನೆ. ಇದು ಅಸಹ್ಯವೆನಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. 
ಎಷ್ಟೋ ತೃತೀಯಲಿಂಗಿಗಳ ಬಳಿ ಈಗಲೂ ವಿಳಾಸದ ಗುರುತಿನ ಪತ್ರಗಳಿಲ್ಲ. ಸರ್ಕಾರ ತಮಗೆ ಏನನ್ನೂ ಮಾಡುತ್ತಿಲ್ಲ, ಚುನಾವಣೆ ಬಂದಾಗಲಾದರೂ ತಮ್ಮ ಕಡೆಗೆ ಆಸಕ್ತಿಯನ್ನೂ ತೋರಿಸುತ್ತಿಲ್ಲ ನಾನು ಪ್ರಜಾಪ್ರಭುತ್ವದ ಭಾಗವಲ್ಲವೇ ಎಂಬ ಪ್ರಶ್ನೆಗಳು ಹಲವರಲ್ಲಿ ಮೂಡುತ್ತಿದೆ. ಆದರೆ, ನಮ್ಮನ್ನು ಪಾಲ್ಗೊಳ್ಳುವಂತೆ ಮಾಡುವು ಆಯೋಗ ಕರ್ತವ್ಯ. ಈ ಬಾರಿ ಅಧಿಕಾರಿಗಳೊಂದಿಗೆ ಹೋಗಿ ಪ್ರತೀ ಜಿಲ್ಲೆಯಲ್ಲಿ ಮತದಾನದ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇನೆ. ನಮ್ಮ ಜನರನ್ನು ತಲುಪಲು ಸಾಧ್ಯವಾದಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಮತದಾನದ ಪ್ರಾಮುಖ್ಯತೆ ತಿಳಿಸುತ್ತಿದ್ದೇವೆ. ಮತದಾನ ಪಟ್ಟಿಯಲ್ಲಿ ಅವರ ಹೆಸರನ್ನು ಸೇರ್ಪಡೆಗೊಳಿಸುವ ಪ್ರಯತ್ನಗಳನ್ನು ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ. 
ಹಿಂದೆ ನಾನು ಹುಡುಗನಾಗಿದ್ದೆ. ಮೂರು ವರ್ಷಗಳ ಹಿಂದೆ ಮನೆ ಬಿಟ್ಟು ಹೊರ ಬಂದಿದ್ದೆ. ಮತದಾನದ ಗುರುತಿನ ಪುರುಷನೆಂದೇ ಇತ್ತು. ತಪ್ಪು ಗುರುತಿನಿಂದ ನಾನು ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಗುರುತಿನ ಚೀಟಿಯನ್ನು ಅಧಿಕಾರಿಗಳು ಸರಿ ಮಾಡಿದ್ದು, ಇದರಲ್ಲಿ ಹೆಣ್ಣು ಎಂದು ನಮೂದಿಸಲಾಗಿದೆ. ಆದರೆ, ಹುಟ್ಟಿನ ದಿನಾಂಕದಲ್ಲಿ ಕೆಲ ದೋಷಗಳು ಕಂಡುಬಂದಿದ್ದು, ನನ್ನ ಸ್ನೇಹಿತರ ಸಹಾಯದೊಂದಿಗೆ 10ನೇ ತರಗತಿ ಅಂಕಪಟ್ಟಿಯನ್ನು ತಂದು, ದೋಷವನ್ನು ಸರಿಪಡಿಸಲಾಯಿತು ಎಂದು ಶಾಂತಿ (37) ಎಂಬುವವರು ಹೇಳಿದ್ದಾರೆ. 
ರಾಮನಗರದಲ್ಲಿ ಮನೆಯಿಂದ ಓಡಿ ಬಂದ ಬಳಿಕ ನಾನು ಬೆಂಗಳೂರಿನಲ್ಲಿ ನೆಲೆಸಿದ್ದೆ. ನನಗಿಂತ ದೊಡ್ಡವರ ಜೊತೆಗಿದ್ದೆ. 24 ವರ್ಷವಾದ ಬಳಿಕ ಸ್ವತಂತ್ರವಾಗಿ ಬದುಕಬೇಕೆನಿಸಿತು. ಆದರೆ, ಮನೆ ಮಾಲೀಕರು ಮನೆಯನ್ನು ನೀಡಲಿಲ್ಲ. ಕಷ್ಟಪಟ್ಟು ರಾಮಮೂರ್ತಿ ನಗರದಲ್ಲಿ ಸಣ್ಣ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದೇನೆ. ಮನೆಯ ಒಪ್ಪಂದ ಪತ್ರವಿದ್ದು, ಇದರಿಂದ ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ಮಾಡಿಸಿದ್ದೇವೆಂದು ನಳಿನಿ (28) ಎಂಬುವವರು ಹೇಳಿದ್ದಾರೆ. 
ಮೊದಲನೇ ಪಿಯುಸಿ ಓದುತ್ತಿದ್ದ ಸಂದರ್ಭದಲ್ಲಿ, ಮನೆಬಿಟ್ಟು ಬಂದಿದ್ದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೆ. ಆದರೆ, ಪ್ರತೀ ಬಾರಿ ಅಧಿಕಾರಿಗಳು ಅವಮಾನಿಸುತ್ತಲೇ ಇದ್ದರು. ದಾಖಲೆಗಳಿಲ್ಲ ಎಂದು ಹಿಂದಕ್ಕೆ ಕಳುಹಿಸುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಆಧಾರ್ ಕಾರ್ಡ್ ಪಡೆದುಕೊಂಡೆ. ವೋಟರ್ ಐಡಿ ಮಾಡಿಸುವಂತೆ ಸ್ನೇಹಿತರು ಹೇಳುತ್ತಲೇ ಇದ್ದರು. ಇದೀಗ ನನ್ನ ಬಳಿ ವೋಟರ್ ಐಡಿ ಇದೆ. ಇದೀಗ ನಾನು ಈ ದೇಶಕ್ಕೆ ಸಂಬಂಧಪಟ್ಟವನೆಂದು ಎನಿಸತೊಡಗಿದೆ ಎಂದು ಪ್ರಿಯಾ (41) ಎಂಬುವವರು ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com