ಹಳೇ ಮೈಸೂರು ಭಾಗದಲ್ಲಿ ಹಾವು-ಮುಂಗುಸಿಯಂತಿರುವ ಕೈ-ತೆನೆ ಕಾರ್ಯಕರ್ತರು: ದೋಸ್ತಿ ಪಕ್ಷಗಳಿಗೆ ಅಗ್ನಿ ಪರೀಕ್ಷೆ!

ರಾಜ್ಯದ 105 ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಆಗಸ್ಟ್ 29ಕ್ಕೆ ಚುನಾವಣೆ ನಿಗದಿ ಪಡಿಸಿ ಆದೇಶ ಹೊರಡಿಸಿದೆ. ಎಚ್ ಡಿ ಕುಮಾರ ಸ್ವಾಮಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದ 105 ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಆಗಸ್ಟ್ 29ಕ್ಕೆ ಚುನಾವಣೆ ನಿಗದಿ ಪಡಿಸಿ ಆದೇಶ ಹೊರಡಿಸಿದೆ.  ಎಚ್ ಡಿ ಕುಮಾರ ಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಇದು ಮೊದಲ ಪರೀಕ್ಷೆಯಾಗಿದ್ದು, ಜನರಿಗೆ ಸಮ್ಮಿಶ್ರ ಸರ್ಕಾರದ ಬಗ್ಗೆ ಇರುವ ಗ್ರಹಿಕೆ ಹೊರಬರುವುದು ಮಾತ್ರವಲ್ಲ, 2019ರ ಲೋಕಸಭೆ ಚುನಾವಣೆಗೆ ಈ ಎಲೆಕ್ಷನ್ ಕಠಿಣ ಪರೀಕ್ಷೆಯಾಗಿದೆ.
ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಬೇಕೆ ಅಥವಾ ಮೈತ್ರಿ ಮಾಡಿಕೊಳ್ಳಬೇಕೆ ಎಂಬುದರ ಬಗ್ಗೆ ಇನ್ನೂ ದೋಸ್ತಿ ಪಕ್ಷಗಳು ನಿರ್ಧರಿಸಿಲ್ಲ, ಆದರೆ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಕಾಂಗ್ರೆಸ್ ಮುಖಂಡರು, ಹಾಗೂ ಸ್ಥಳೀಯ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಈ ವಿಷಯವನ್ನು ಇತ್ತೀಚೆಗೆ ಸಿದ್ದರಾಮಯ್ಯ ಆಯೋಜಿಸಿದ್ದ ಭೋಜನ ಕೂಟದಲ್ಲಿ ಚರ್ಚಿಸಲಾಗಿದೆ.
ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಫರ್ಧಿಸಬೇಕೆಂಬುದು ಅನೇಕ ಕಾಂಗ್ರೆಸ್ ಸಚಿವರ ಬಯಕೆಯಾಗಿದೆ, ಜೆಡಿಎಸ್ ಜೊತೆಗಿನ  ಮೈತ್ರಿಗೆ ಈಗಾಗಲೇ ಹಲವು ತಾಲೂ ಮತ್ತು ಜಿಲ್ಲಾ ಮುಖ್ಯಸ್ಥರು ವಿರೋಧ ವ್ಯಕ್ತ ಪಡಿಸಿದ್ದಾರೆ, ಒಂದು ವೇಳೆ ಮೈತ್ರಿ ಮಾಡಿಕೊಂಡಿದ್ದೇ ಆದರೆ ತಳ ಮಟ್ಟದಲ್ಲಿ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಲಾಗಿದೆ. ಸ್ಥಳೀಯ ಮಟ್ಟದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡುವುದು ಅಸಾಧ್ಯ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಜೆಡಿಎಸ್ ಸರ್ವೋಚ್ಚ ನಾಯಕ ಎಚ್ ಡಿ ದೇವೇಗೌಡ., 2019ರ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಈಗಾಗಲೇ ನಿರ್ಧರಿಸಿದ್ದಾರೆ, ಆದರೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎರಡು ಪಕ್ಷಗಳು ಸ್ವತಂತ್ರ್ಯವಾಗಿ ಸ್ಪರ್ಧಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. 
ಈ ಸ್ಥಳೀಯ ಸಂಸ್ಥೆ ಚುನಾವಣೆ ದೋಸ್ತಿ ಪಕ್ಷಗಳ ಬಾಂಧವ್ಯದ ಪರೀಕ್ಷೆಯ ಚುನಾವಣೆಯಾಗಿದೆ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ  ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ, ಆದರೆ ಬಿಜೆಪಿಗೆ ಆ ಶಕ್ತಿಯಿಲ್ಲ.
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಇತ್ತೀಚೆಗೆ ಉತ್ತರ ಕರ್ನಾಟಕದ ಬಗ್ಗೆ ನೀಡಿದ ಹೇಳಿಕೆ ಹಾಗೂ ಸಾಲಮನ್ನಾ ವಿಷಯ ಎರಡು ಪಕ್ಷಗಳ ಪ್ರಚಾರಕ್ಕೆ ಕಾರಣವಾಗಿವೆ. ಕುಮಾರ ಸ್ವಾಮಿ ನೇತೃತ್ವದ ಸರ್ಕಾರ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಬಯಸುತ್ತಿದೆ. ಈ ಚುನಾವಣೆಯಲ್ಲಿ  ಜೆಡಿಎಸ್ ಹೆಚ್ಚಿನ ಸ್ಥಾನ ಗಳಿಸಿದರೇ ಲೋಕಸಭೆ ಚುನಾವಣೆಯಲ್ಲಿ ಅಧಿಕ ಸಂಖ್ಯೆಯ  ಸೀಟುಗಳನ್ನು ಕೇಳಲು ಸಾದ್ಯವಾಗುತ್ತದೆ. ಜೆಡಿಎಸ್ ಗೆ ಹೆಚ್ಚಿನ ಸ್ಥಾನ ನೀಡಿದರೇ  ಕಾಂಗ್ರೆಸ್ ಒಳಗೆ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com