ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಚಟುವಟಿಕೆಗಳಲ್ಲಿ ಮಾಜಿ ಸಂಸದೆ ರಮ್ಯಾ ಸಕ್ರಿಯರಾಗಿಲ್ಲ ಏಕೆ?

ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾದ ಬಳಿಕ ಸುಂಟರಗಾಳಿಯಂತೆ ಟ್ವೀಟ್ ಗಳನ್ನು ಮಾಡುತ್ತಿದ್ದ ಮಾಜಿ ಸಂಸದೆ, ನಟಿ ಹಾಗೂ ರಾಜಕಾರಣಿ ರಮ್ಯಾ...
ರಮ್ಯಾ
ರಮ್ಯಾ
ನವದೆಹಲಿ: ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾದ ಬಳಿಕ ಸುಂಟರಗಾಳಿಯಂತೆ ಟ್ವೀಟ್ ಗಳನ್ನು ಮಾಡುತ್ತಿದ್ದ ಮಾಜಿ ಸಂಸದೆ, ನಟಿ ಹಾಗೂ ರಾಜಕಾರಣಿ ರಮ್ಯಾ ಉತ್ಸಾಹಕ್ಕೆ ಇದೀಗ ಹೈಕಮಾಂಡ್ ಬ್ರೇಕ್ ಹಾಕಿದೆ ಎನ್ನಲಾಗಿದೆ. 
ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾದ ಬಳಿಕ ರಮ್ಯಾ ಅವರಿಗೆ ಹೈಕಮಾಂಡ್ ಅನಗತ್ಯವಾಗಿ ಟ್ವೀಟ್ ಮಾಡದಂತೆ ಮತ್ತು ರಾಹುಲ್ ಗಾಂಧಿಗೆ ಸಂಬಂಧಪಟ್ಟ ಸುದ್ದಿಗಳನ್ನು ಟ್ವೀಟ್ ಮಾಡದಂತೆ ಸೂಚನೆ ನೀಡಿತ್ತು. ಆದರೆ ರಮ್ಯಾ ಇದನ್ನು ಪಾಲಿಸದೆ. ವಿನಃಕಾರಣ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟ್ವೀಟ್ ಮಾಡಿ ಬಹಳಷ್ಟು ಬಾರಿ ಎಡವಟ್ಟು ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗಿದ್ದ ಜವಾಬ್ದಾರಿಯನ್ನು ಬದಲಾಯಿಸಲಾಗಿದೆ ಎನ್ನಲಾಗಿದೆ. 
ಇನ್ನು ರಮ್ಯಾ ಕಾರ್ಯ ವೈಖರಿಯಿಂದಾಗಿ ಕಾಂಗ್ರೆಸ್ ಹೈಕಮಾಂಡ್ ಬೇರಸಗೊಂಡಿದ್ದು ಕೆಲ ಹಿರಿಯ ನಾಯಕರೂ ಸಹ ರಮ್ಯಾಗೆ ಅಂಕುಶ ಹಾಕುವಂತೆ ಸಲಹೆ ನೀಡಿದ್ದರು ಎಂದು ತಿಳಿದುಬಂದಿದೆ. ಇದರಿಂದಾಗಿಯೇ ರಮ್ಯಾ ಬದಲಿಗೆ ರಾಜಸ್ಥಾನದ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಅವರ ಪುತ್ರ ನಿಖಿಲ್ ಜೆ ಆಳ್ವಾ ಅವರಿಗೆ ಸಾಮಾಜಿಕ ಜಾಲತಾಣಗಳ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿದುಬಂದಿದೆ. 
ರಮ್ಯಾ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆಯುವಂತೆ ಸಲಹೆ ನೀಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. 
ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ರಮ್ಯಾ ಅವರ ಹೆಸರಿದ್ದರೂ ಕೂಡ ಅವರನ್ನು ಚುನಾವಣಾ ಪ್ರಚಾರದಿಂದ ದೂರ ಇಡಲಾಗಿತ್ತು. ಒಂದು ವೇಳೆ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರೆ ಪಕ್ಷಕ್ಕೆ ನಷ್ಟ ಹೆಚ್ಚಾಗುವ ಸಾಧ್ಯತೆಯಿದೆ ಎಂದು ರಾಜ್ಯ ನಾಯಕರು ಪ್ರಚಾರದಿಂದ ದೂರ ಇಟ್ಟಿದ್ದರು ಎನ್ನಲಾಗಿದೆ. 
ಸದ್ಯ ರಮ್ಯಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವೀಟ್ ಗಳನ್ನು ರೀಟ್ವೀಟ್ ಮಾಡುವ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com