ಸರ್ಕಾರ ಅಸ್ಥಿರಗೊಳಿಸುವ ಕಾಂಗ್ರೆಸ್ ನೊಳಗಿನ ಭಿನ್ನಾಭಿಪ್ರಾಯ ಶಮನಕ್ಕೆ ಹೈಕಮಾಂಡ್ ಯತ್ನ

ಸಮ್ಮಿಶ್ರ ಸರ್ಕಾರದ ಮೈತ್ರಿಕೂಟಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಅಸ್ಥಿರತೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮೈತ್ರಿಕೂಟಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಅಸ್ಥಿರತೆ ಉಂಟಾಗಿರಬಹುದು ಎಂಬ ಸಂದೇಹಗಳಿಗೆ ಕೊನೆಹಾಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.

ಸಂಪೂರ್ಣ 5 ವರ್ಷಗಳವರೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಆಡಳಿತ ನಡೆಸಲು ಬೆಂಬಲ ನೀಡುವ ತನ್ನ ಬದ್ಧತೆಯನ್ನು ಕಾಂಗ್ರೆಸ್ ತೋರಿಸಬೇಕಾಗಿದೆ. ಹೀಗಾಗಿ ಪಕ್ಷದೊಳಗೆ ನಾಯಕರಲ್ಲಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಕಾರ್ಯಕ್ಕೆ ಹೈಕಮಾಂಡ್ ಮುಂದಾಗಿದೆ.

ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸಮಸ್ಯೆಯನ್ನು ಬಗೆಹರಿಸಲು ಶೀಘ್ರವೇ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಾಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ನಾಯಕತ್ವದ ಒಂದು ಬಣ ಪದೇ ಪದೇ ಈ ರೀತಿ ಭಿನ್ನಾಭಿಪ್ರಾಯ ತೋರಿಸುತ್ತಿರುವ ಬಗ್ಗೆ ಚರ್ಚೆ ನಡೆಯಲಿದೆ. ಇಲ್ಲಿ ಸಮನ್ವಯ ಸಮಿತಿ ಮುಖ್ಯಸ್ಥರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಭಿನ್ನರಾಗ ಹಾಡುತ್ತಿರುವವರಲ್ಲಿ ಪ್ರಮುಖರು ಎಂಬುದು ಗಮನಾರ್ಹ ಎಂದು ರಾಜ್ಯ ಕಾಂಗ್ರೆಸ್ ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿವೆ.

ಕೆ ಸಿ ವೇಣುಗೋಪಾಲ್ ಅವರು ಸೆಪ್ಟೆಂಬರ್ 1 ಮತ್ತು 2ರಂದು ಮುಂಬರುವ ಲೋಕಸಭೆ ಚುನಾವಣೆ ತಯಾರಿ ಸಂಬಂಧ ಕಾಂಗ್ರೆಸ್ ನಾಯಕರು, ಸಂಸದರು, ಶಾಸಕರು ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಲಿದ್ದಾರೆ. ಸೆಪ್ಟೆಂಬರ್ 3ರಂದು ಸಿದ್ದರಾಮಯ್ಯನವರು 10 ದಿನಗಳ ಯುರೋಪ್ ಪ್ರವಾಸ ಕೈಗೊಳ್ಳಲಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಕಾಂಗ್ರೆಸ್ ಸಚಿವರ ಕೆಲಸ ಮತ್ತು ಸಾಧನೆಗಳ ಕುರಿತು ಕೂಡ ಚರ್ಚೆ ನಡೆಸಲಾಗುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ಕಾಂಗ್ರೆಸ್ ಸಚಿವರ ಸಾಧನೆಗಳ ಮೌಲ್ಯಮಾಪನ ಮಾಡಲು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ.

ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗುವ ರೀತಿ ಯಾವುದೇ ಹೇಳಿಕೆಗಳನ್ನು ನೀಡಬಾರದು ಮತ್ತು ಕೆಲಸಗಳನ್ನು ಮಾಡಬಾರದು ಎಂದು ಸಭೆಯಲ್ಲಿ ಕೆ ಸಿ ವೇಣುಗೋಪಾಲ್ ಅವರು ಕಟ್ಟುನಿಟ್ಟಿನ ಸಂದೇಶವನ್ನು ರವಾನಿಸಲಿದ್ದಾರೆ.

ಆಷಾಢ ಮಾಸ ಮುಗಿದ ಮೇಲೆ ಮತ್ತು ನಗರ ಸ್ಥಳೀಯ ಸಂಸ್ಥೆ ಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ಹೈಕಮಾಂಡ್ ತನ್ನ ಮಾತನ್ನು ಉಳಿಸಿಕೊಳ್ಳಲಿದೆ. ಸಂಪುಟಕ್ಕೆ ಕಾಂಗ್ರೆಸ್ ನ ಮೂವರಿಂದ ನಾಲ್ವರು ಸಚಿವರು ಸೇರ್ಪಡೆಯಾಗುವ ಸಾಧ್ಯತೆಯಿದೆ.

20 ನಿಗಮ ಮಂಡಳಿಗಳಿಗೆ ಸೆಪ್ಟೆಂಬರ್ 15ರ ವೇಳೆಗೆ ಮುಖ್ಯಸ್ಥರ ನೇಮಕ ಮತ್ತು ನಂತರ ಸಚಿವ ಸಂಪುಟ ವಿಸ್ತರಣೆ ನೆರವೇರಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಸಚಿವ ಸ್ಥಾನಕ್ಕೆ ಎಂ ಬಿ ಪಾಟೀಲ್, ಸಂಗಮೇಶ್, ಶಿವಳ್ಳಿ, ಎಸ್ ಟಿ ಸೋಮಶೇಖರ್, ಸುಧಾಕರ್ ಮತ್ತು ಎಂ ಟಿ ಬಿ ನಾಗರಾಜ್ ಅವರ ಹೆಸರು ಕೇಳಿಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com