'ಸಿದ್ಧಗಂಗಾ ಶ್ರೀಗೆ ಮುಸ್ಲಿಂ ವೈದ್ಯರಿಂದ ಚಿಕಿತ್ಸೆ': 'ಧರ್ಮ' ಹೇಳಿಕೆಗೆ ಕ್ಷಮೆ ಕೇಳಿದ ಡಿಕೆಶಿ

ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳಿಗ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ಧರ್ಮದ ಬಗ್ಗೆ ಮಾತನಾಡಿದ್ದ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರು ಸೋಮವಾರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್
ಬೆಂಗಳೂರು: ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳಿಗ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ಧರ್ಮದ ಬಗ್ಗೆ ಮಾತನಾಡಿದ್ದ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರು ಸೋಮವಾರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಚೆನ್ನೈನ ರೆಲಾ ಆಸ್ಪತ್ರೆ ವಿಚಾರದಲ್ಲಿ ನಾನು ನೀಡಿದ ಹೇಳಿಕೆಯನ್ನು ಬಿಜೆಪಿ ಮುಖಂಡರು ತಿರುಚಿದ್ದು, ನನ್ನ ಹೇಳಿಕೆಯನ್ನು ಯಾರೂ ತಪ್ಪಾಗಿ ಭಾವಿಸುವುದು ಬೇಡ. ಒಂದೊಮ್ಮೆ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು ತಮ್ಮ ಧರ್ಮ ಹೇಳಿಕೆ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಡಿಕೆಶಿ, ನನ್ನ ಹೇಳಿಕೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ಮಿಸಿದ್ದಾರೆ. ಒಂದು ಉತ್ತಮ ಆಸ್ಪತ್ರೆ ನಿರ್ಮಾಣ, ನಿರ್ವಹಣೆಗೆ ಯಾವುದೇ ಜಾತಿ, ಧರ್ಮದ ಲೇಪ ಇರುವುದಿಲ್ಲ ಎಂಬುದು ನನ್ನ ಮಾತಿನ ತಿರುಳಾಗಿತ್ತು. ನೈಜ ಭಾವನೆಯ ಈ ಹೇಳಿಕೆಯನ್ನು ಬಿಜೆಪಿಯವರು ತಿರುಚಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ಸಿದ್ಧಗಂಗಾ ಶ್ರೀಗಳ ದೊಡ್ಡ ಅಭಿಮಾನಿ ಎಂದು ಡಿಕೆಶಿ ಹೇಳಿದ್ದಾರೆ.
ಕಳೆದ ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿಕೆಶಿ, ಸಿದ್ದಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಯಾರು ಕೂಡ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ. ಅಲ್ಲಿ ಅಲ್ಪಸಂಖ್ಯಾತರ ಆಡಳಿತ ಮಂಡಳಿ ಇದ್ದರೂ ಶ್ರೀಗಳನ್ನು ಚೆನ್ನಾಗಿ ‌ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದರು.
ಮುಸ್ಲಿಂ ಸಮುದಾಯದ ‌ಹೆಸರಾಂತ ವೈದ್ಯ ಮೊಹಮ್ಮದ್ ರೇಲಾ ಎನ್ನುವರು ಶ್ರೀಗಳಿಗೆ ಶಸ್ತ್ರಚಿಕಿತ್ಸೆ ‌ಮಾಡಿದ್ದಾರೆ. ಇವರು ಈ ಹಿಂದೆ 5 ವರ್ಷದ ಮಗುವಿಗೂ ಆಪರೇಷನ್ ಮಾಡಿದ್ದರು. ಇದೀಗ, 111ರ ವಯಸ್ಸಿನ ಶ್ರೀಗಳಿಗೆ ಆಪರೇಷನ್ ‌ಮಾಡಿದ್ದಾರೆ. ನಾನು ವೈದ್ಯಕೀಯ ಶಿಕ್ಷಣ ‌ಸಚಿವನಾಗಿ ಹೇಳುತ್ತಿದ್ದೇನೆ. ಇಂಥ ಆಸ್ಪತ್ರೆಯನ್ನು ನಾನು ಎಲ್ಲೂ ನೋಡಲಿಲ್ಲ. ಈ ಆಸ್ಪತ್ರೆ ತುಂಬಾ ಚೆನ್ನಾಗಿದೆ. ಅಲ್ಲಿನ ವೈದ್ಯರ ಶ್ರೀಗಳಿಗೆ ಸೂಕ್ತ ಚಿಕಿತ್ಸೆ ಕೊಟ್ಟು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದಿದ್ದರು. ಸಚಿವರ ಈ ಹೇಳಿಕೆಗೆ ಬಿಜೆಪಿ ಮುಖಂಡರು, ಮಠದ ಕಿರಿಯ ಶ್ರೀ ಹಾಗೂ ಭಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com