ಬೆಳಗಾವಿ: ರಾಜ್ಯ ಕಾಂಗ್ರೆಸ್ ನಾಯಕರು ಕೊಟ್ಟ ಮಾತಿನಂತೆ ಡಿಸೆಂಬರ್ 22 ರಂದು ಸಂಪುಟ ವಿಸ್ತರಣೆ ಮಾಡುತ್ತಿದ್ದಾರೆ. ಇದೇ ವೇಳೆ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈ ಬಿಡಲಾಗಿದೆ,
ಜಿಲ್ಲೆಯ ಹಿರಿಯ ನಾಯಕ ರಮೇಶ ಜಾರಕಿಹೊಳಿ ಅವರಿಗೆ ಸಂಪುಟದಿಂದ ಕೋಕ್ ಕೊಟ್ಟಿದಕ್ಕೆ ವೈಯಕ್ತಿಕವಾಗಿ ನನಗೆ ತುಂಬಾ ಬೇಸರ ಹಾಗೂ ದುಃಖವಾಗಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಕ್ಷೇತ್ರದಿಂದ ರಮೇಶ ಜಾರಕಿಹೊಳಿ ಆಯ್ಕೆ ಆಗಿದ್ದಾರೆ. ಐದು ಸಲ ಶಾಸಕರಾಗಿರುವ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಹಿರಿಯರು. ಹೈಕಮಾಂಡ್ ಅವರನ್ನು ಕೈಬಿಟ್ಟಿದಕ್ಕೆ ನನಗೆ ಬೇಸರವಾಗಿದೆ ಎಂದರು.
ಜಿಲ್ಲೆಯ ಮತ್ತೊಬ್ಬರಿಗೆ ಸಚಿವ ಸ್ಥಾನ ಸಿಕ್ಕಿದ್ದು ಬೇರೆ ವಿಚಾರ. ಆದರೆ ರಮೇಶ ಅವರನ್ನು ಕೈ ಬಿಟ್ಟಿದ್ದು ದುಃಖ ಹಾಗೂ ಕೆಟ್ಟದ್ದು ಅನಿಸಿದೆ. ಹೀಗೆ ಆಗಬಾರದಿತ್ತು ಎಂದರು. ಜಿಲ್ಲೆಗೆ ಸಚಿವ ಸ್ಥಾನದ ಜತೆಗೆ ಎರಡು ಕಾರ್ಯದರ್ಶಿ ಹುದ್ದೆ ದೊರೆತಿವೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.