ಸಿಎಂ ಕುಮಾರಸ್ವಾಮಿ ಇನ್ನೆಷ್ಟು ದಿನ ತಾಳ್ಮೆಯಿಂದ ಕಾಯುತ್ತಾರೋ ನೋಡೋಣ: ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ

ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್'ನ ಇತ್ತೀಚಿನ ನಡವಳಿಕೆಗಳ ಬಗ್ಗೆ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ....
ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ
ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ
ಬೆಂಗಳೂರು: ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್'ನ ಇತ್ತೀಚಿನ ನಡವಳಿಕೆಗಳ ಬಗ್ಗೆ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇನ್ನೆಷ್ಟು ದಿನ ತಾಳ್ಮೆಯಿಂದ ಕಾಯುತ್ತಾರೋ ನೋಡೋಣ. ಎಲ್ಲವನ್ನೂ ಸುಮ್ಮನೆ ನೋಡಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಪುಟಗೋಸಿ ಮಂತ್ರಿಗಿರಿಗಾಗಿ ನಾವು ಕಾದು ಕುಳಿತುಕೊಂಡಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಸಂಸದೀಯ ಕಾರ್ಯದರ್ಶಿ, ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಮುನ್ನ ಉಭಯ ಪಕ್ಷಗಳ ನಾಯಕರು, ರಾಷ್ಟ್ರೀಯ ಅಧ್ಯಕ್ಷರು ಚರ್ಚೆ ನಡೆಸಬೇಕು. ಆದರೆ, ಅಂತಹ ಚರ್ಚೆಯನ್ನು ಯಾರು ಎಲ್ಲಿ ನಡೆಸಿದ್ದಾರೆ ಎಂಬುದೇ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಪರಮೇಶ್ವರ ಅವರ ಬಳಿ ಇದ್ದ ಗೃಹ ಖಾತೆಯನ್ನು ಕಿತ್ತುಕೊಂಡಿರುವುದರ ಹಿಂದೆ ಕಾಂಗ್ರೆಸ್ ನಾಯಕರ ಸಂಚಿರಬಹುದೇ ಹೊರತು ತಮ್ಮ ಪಾತ್ರವಿಲ್ಲ. 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ, ಕಳೆದ 6 ತಿಂಗಳಿಂದ ಗೃಹ ಸಚಿವರಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಗೃಹ ಇಲಾಖೆಯಲ್ಲಿ ನಾನು ಹಸ್ತಕ್ಷೇಪ ಮಾಡಿದ್ದರಿಂದಲೇ ನೊಂದು ಗೃಹ ಖಾತೆಯನ್ನು ಪರಮೇಶ್ವರ್ ಬಿಟ್ಟುಕೊಟ್ಟಿದ್ದಾರೆಂದು ಯಾರು ಅಪಪ್ರಚಾರ ಮಾಡುತ್ತಿದ್ದಾರೋ ಅವರೇ ಎತ್ತಂಗಡಿಗೆ ಕಾರಣ ಇರಬಹುದು ಎಂದು ತಿಳಿಸಿದ್ದಾರೆ. 
ನಾನು ಎಂದೂ ಕೂಡ ಪರಮೇಶ್ವರ್ ಅವರು ಗೃಹ ಸಚಿವರಾಗಿದ್ದ ವೇಳೆ ವರ್ಗಾವಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲಿ. ಒಬ್ಬ ಅಟೆಂಡರ್ ವರ್ಗಾವಣೆಗೂ ಅವರ ಬಳಿ ಹೋಗಿಲ್ಲ. ನನ್ನ ಕ್ಷೇತ್ರದ ಕೆಲಸಗಳಿಗೆ ಹೊರತುಪಡಿಸಿದರೆ ಬೇರೆ ಯಾವುದೇ ಕೆಲಸಕ್ಕೂ ಹೋಗಿಲ್ಲ. ಮುಖ್ಯಮಂತ್ರಿಗಳು ಸಹ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com