ಭ್ರಷ್ಟಾಚಾರ ಕುರಿತು 'ವಾಕ್ ದ ಟಾಕ್' ಬಹಿರಂಗ ಚರ್ಚೆಗೆ ಬನ್ನಿ: ಪ್ರಧಾನಿ ಮೋದಿಗೆ ಸಿಎಂ ಸಿದ್ದು ಸವಾಲ್
ಬಿಜೆಪಿ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಪರ್ಸೆಂಟೇಜ್ ಸರ್ಕಾರ ಎಂದು ಟೀಕೆ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆಗೆ ತೀಕ್ಷ್ಮ ಪ್ರತಿಕ್ರಿಯೆ ನೀಡುವುದನ್ನು...
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ
ಬೆಂಗಳೂರು: ಬಿಜೆಪಿ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಪರ್ಸೆಂಟೇಜ್ ಸರ್ಕಾರ ಎಂದು ಟೀಕೆ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆಗೆ ತೀಕ್ಷ್ಮ ಪ್ರತಿಕ್ರಿಯೆ ನೀಡುವುದನ್ನು ಮುಂದುವರೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಭ್ರಷ್ಟಾಚಾರ ವಿರುದ್ದ ವಾಕ್ ದಿ ಟಾಕ್ ನಡೆಸೋಣ ಬನ್ನಿ ಎಂದು ಮೋದಿಯವರಿಗೆ ಆಹ್ವಾನ ನೀಡಿದ್ದಾರೆ.
ನಿನ್ನೆ ಬೆಳಿಕ್ಕೆ 10.30ರ ಸುಮಾರಿಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ಕುರಿತಂತೆ ಮಾತನಾಡುತ್ತಿರುವುದು ನನಗೆ ಸಂತಸವನ್ನು ತಂದಿದೆ. ಈಗ ನಾನು ವಾಕ್ ದಿ ಟಾಕ್'ಗೆ ಅವರನ್ನು ಆಹ್ವಾನಿಸುತ್ತೇನೆಂದು ಹೇಳಿದ್ದಾರೆ.
ಇದೇ ವೇಳೆ ಮೋದಿಯವರಿದೆ ನಾಲ್ಕು ಸವಾಲುಗಳನ್ನು ಎಸೆದಿರುವ ಸಿಎಂ ಸಿದ್ದರಾಮಯ್ಯ,
ಭ್ರಷ್ಟಾಚಾರ ಕುರಿತು ವಾಕ್ ದಿ ಟಾಕ್ ಆರಂಭಕ್ಕೆ ಪೂರ್ವಭಾವಿಯಾಗಿ ನೀವು ಲೋಕಪಾಲ್ ನೇಮಕ ಮಾಡುವಿರಾ?
ಸಿಬಿಐ ನ್ಯಾಯಾಧೀಶ ಲೋಯಾ ಅವರ ಸಾವಿನ ತನಿಖೆ ನಡೆಸುವಿರಾ?
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ಆಸ್ತಿಯ ಪವಾಡ ಸದೃಶ ಹೆಚ್ಚಳ ಬಗ್ಗೆ ತನಿಖೆ ನಡೆಸುವಿರಾ?
ಕಳಂಕ ರಹಿತ ವ್ಯಕ್ತಿಯನ್ನು ನಿಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ನೇಮಕ ಮಾಡುವಿರಾ? ಎಂದು ಕೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸವಾಲುಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯಾವುದೇ ರೀತಿಯ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್. ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರ ವಿರುದ್ಧ ತೀವ್ರವಾಗಿ ಕಿಡಿಕಾರಿ, ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ.
ಡಿಯರ್ ಮಿ.10 ಪರ್ಸೆಂಟ್ ಸಿಎಂ ಸಿದ್ದರಾಮಯ್ಯ ಎಂಬು ಸಂಬೋಧಿಸಿರುವ ಯಡಿಯೂರಪ್ಪ ಅವರು, ನೀವು ಚರ್ಚೆಗೆ ಮುಂದಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ಇದನ್ನು ದೆಹಲಿವರೆಗೆ ಕೊಂಡೊಯ್ಯುವ ಮೊದಲು ನೀವು ನನ್ನ ಕೆಳಕಂಡ ಪಂಚ ಪ್ರಶ್ನೆಗಳಿಗೆ ಉತ್ತರಿಸಬಹುದಲ್ಲ ಎಂದೂ ವ್ಯಂಗ್ಯವಾಡಿದ್ದಾರೆ.
ಲೋಕಾಯುಕ್ತ ಸಂಸ್ಥೆಗಿದ್ದ ಎಲ್ಲಾ ಅಧಿಕಾರಿಗಳನ್ನು ಕಿತ್ತಕೊಂಡು ಅದನ್ನು ಹಲ್ಲಿಲ್ಲದ ಸಂಸ್ಥೆಯನ್ನಾಗಿ ಮಾಡಿದ್ದು ಯಾಕೆ?
ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಬಿಐ ದಾಖಲಿಸಿರುವ ಎಫ್ಐಆರ್ ನಲ್ಲಿ ನಂ.1 ಆರೋಪಿಯಾಗಿರುವ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ನೀವು ಯಾವ ಕ್ರಮ ಕೈಗೊಂಡಿದ್ದೀರಿ? ಅಂತಹ ಸಚಿವರ ಬೆನ್ನಿಗೆ ನೀವು ನಿಂತುಕೊಂಡಿದ್ದು ಏಕೆ? ಅಂತಹ ಕಳಂಕಿತ ಸಚಿವರನ್ನು ಇಟ್ಟುಕೊಕಂಡು ನಿಮ್ಮ ಸಂಪುಟದ ಮೌಲ್ಯ ಎಲ್ಲಿ ಹೋಯಿತು?
ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಉದ್ಯಮಿಯೊಬ್ಬರಿಗೆ ಅನುಕೂಲ ಮಾಡಿಕೊಟ್ಟ ಬದಲಾಗಿ ನೀವು ಅಧಿಕಾರಿಯೊಬ್ಬರಿಂದ ಪಡೆದುಕೊಂಡಿದ್ದು ಎನ್ನಲಾದ ರೂ.70 ಲಕ್ಷ ಮೌಲ್ಯದ ಹ್ಯೂಬ್ಲೋಟ್ ವಾಚ್, ನಿಮ್ಮ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ಲವೇ?
ನೀವು ರೈತರ ಪರವಾಗಿರುವವರು ಎಂದು ಹೇಳಿಕೊಳ್ಳುತ್ತೀರಿ. ಹಾಗಿದ್ದ ಮೇಲೂ ನಿಮ್ಮ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 3,500ಕ್ಕೂ ಹೆಚ್ಚು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ?
ಕೊಪ್ಪಳ ಮತ್ತು ಕುಷ್ಟಗಿ ತಾಲೂಕುಗಳಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕೆಲಸ ಮಾಡದೆ ನಕಲಿ ಬಿಲ್ ಗಳನ್ನು ಸೃಷ್ಟಿಸಿ ಹಣ ಹೊಡೆದ ರೂ.39,38 ಕೋಟಿ ಮೊತ್ತದ ನೀರಾವರಿ ಹಗರಣವನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ.
ಇದರಂತೆ ಇತರೆ ಬಿಜೆಪಿ ನಾಯಕರೂ ಕೂಡ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ. ಬಿಜೆಪಿ ನಾಯಕ ಸಿಟಿ ರವಿಯವರೂ ಕೂಡ ಇದೇ ರೀತಿ ಟ್ವೀಟ್ ಮಾಡಿ, ಸಿದ್ದರಾಮಯ್ಯ ಅವರನ್ನು ಭ್ರಷ್ಟಾಚಾರಗಳ ರಾಜರೆಂದು ಕರೆದಿದ್ದಾರೆ.
ಇದರಂತೆ ಕಾಂಗ್ರೆಸ್ ವಿರುದ್ದ ಬಿಜೆಪಿ ನಾಯಕರು ಉತ್ತರ ಕೊಡಿ (ಆನ್ಸರ್ ಮಿ) ಅಭಿಯಾನವನ್ನು ಆರಂಭಿಸಿದ್ದಾರೆ. ಬಿಜೆಪಿ ನಾಯಕರ 10 ಪರ್ಸೆಂಟ್ ಕಮಿಷನ್ ಹೇಳಿಗೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೆಪಿಸಿಸಿಯ ಟ್ವಿಟರ್ ಖಾತೆ ಮೂಲಕ ರಫೇಲ್ ಒಪ್ಪಂದ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಪ್ರಶ್ನೆ ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಫೇಲ್ ಒಪ್ಪಂದವನ್ನು ಹೆಚ್ಎಎಲ್ ನಿಂದ ಖಾಸಗಿ ಕಂಪನಿಗೆ ಸ್ಥಳಾಂತರಿಸಲು 10 ಪರ್ಸೆಂಟ್ ಕಮಿಷನ್ ಪಡೆದಿದ್ದರೇ? ಎಂದು ಪ್ರಶ್ನಿಸಿದ್ದಾರೆ.