ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಈಗಾಗಲೇ ಮೊದಲ ಸುತ್ತಿನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಹೊಸ ಚುನಾವಣಾ ತಂತ್ರಗಾರಿಕೆ ಕಡೆ ಗಮನ ಕೇಂದ್ರೀಕರಿಸುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಕರೆ ನೀಡಿದ್ದಾರೆ.
ಎರಡನೇ ಹಂತದಲ್ಲಿ ಮತ್ತಷ್ಟು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗಾಗಿ ತಯಾರಿ ನಡೆಸುತ್ತಿದ್ದು, ಸಾರ್ವಜನಿಕರಿಗೆ ಹತ್ತಿರವಾಗಲು ಅಭ್ಯರ್ಥಿಗಳು ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ಇನ್ನು ಚುನಾವಣಾ ಪ್ರಚಾರಕ್ಕಾಗಿ 100 ಎಲ್ ಇಡಿ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ವಾಹನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪಕ್ಷಗಳಿಗೆ ಜೆಡಿಎಸ್ ಪರ್ಯಾಯವಾಗಿದೆ ಎಂಬ ಸಂದೇಶವನ್ನು ರಾಜ್ಯ ಎಲ್ಲಾ ಕ್ಷೇತ್ರದ ಜನರಿಗೆ ತಿಳಿಸಲಾಗುತ್ತದೆ ಎಂದರು.
ಇನ್ನೂ ಪಕ್ಷದ ವಿರುದ್ಧ ಬಂಡಾಯ ಸಾರಿರುವ ಶಾಸಕರು ಜೆಡಿಎಸ್ ಗೆ ದೊಡ್ಡ ಸಮಸ್ಯೆ ಅಲ್ಲ, ಬಲವಂತವಾಗಿ ಅವರ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸುವುದರಿಂದ ಯಾವುದೇ ಫಲಿತಾಂಶ ದೊರೆಯವುದಿಲ್ಲ ಎಂದು ಹೇಳಿದ್ದಾರೆ.
ಚಲನಚಿತ್ರ ನಿರ್ದೇಶಕ ಎಸ್.ಮಹೇಂದರ್ ಜೆಡಿಎಸ್ ಸೇರ್ಪಡೆಯಾದರು. ಪಕ್ಷದ ಬಾವುಟ ನೀಡಿ ಸ್ವಾಗತಿಸಿದ ಕುಮಾರಸ್ವಾಮಿ, ‘ಮಹೇಂದ್ರ ನಿರ್ದೇಶಿಸಿದ್ದ ಹಲವು ಚಲನಚಿತ್ರಗಳನ್ನು ಹಿಂದೆ ವಿತರಣೆ ಮಾಡಿದ್ದೆ. ರಾಜ್ಯದ ಹಿತದೃಷ್ಟಿಯಿಂದ ಜೆಡಿಎಸ್ ಗೆಲ್ಲಿಸಬೇಕು ಎಂಬ ಕಾರಣಕ್ಕೆ ಪಕ್ಷ ಸೇರುತ್ತಿದ್ದಾರೆ ಎಂದರು.
ಬೆಂಗಳೂರು ನಗರದ ಬಿಪಿಎಲ್ ಕುಟುಂಬದವರಿಗೆ ಅವರ ಮನೆ ಬಾಗಿಲಿನಲ್ಲೇ ಆರೋಗ್ಯ ಸೇವೆ ನೀಡುವ ‘ಕುಮಾರ ರಕ್ಷಾ ಜನಸೇವಾ ವಾಹನ’ಕ್ಕೆ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.