
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನದ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ ಇನ್ನೂ ನಿರ್ಧರಿಸಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಕುರಿತು ಕೇಳಿಬರುತ್ತಿರುವ ಊಹಾಪೋಹಗಳಿಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಏಪ್ರಿಲ್ 15ರ ವೇಳೆಗೆ ಅಥವಾ ಮೇ ಮೊದಲ ವಾರದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಅವರ ಹೇಳಿಕೆ ಬಗ್ಗೆ ವಿಚಾರಿಸಿದಾಗ ಮತದಾನ ದಿನಾಂಕದ ಬಗ್ಗೆ ಭಾರತೀಯ ಚುನಾವಣಾ ಆಯೋಗದಿಂದ ತಮಗೆ ಯಾವುದೇ ಮಾಹತಿ ಬಂದಿಲ್ಲ ಎಂದು ತಿಳಿಸಿದರು.
ರಾಜ್ಯ ಚುನಾವಣಾ ಆಯೋಗ ಯಾವುದಾದರೂ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿದೆಯೇ ಎಂದು ಕೇಳಿದಾಗ, ಸಂಜೀವ್ ಕುಮಾರ್ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.
ಚುನಾವಣೆಯ ಮತದಾನದ ದಿನಾಂಕವನ್ನು ನಿಗದಿಪಡಿಸುವುದು ತಮ್ಮ ಅಧಿಕಾರ ವ್ಯಾಪ್ತಿಗೆ ಮೀರಿದ್ದು. ಚುನಾವಣೆಗೆ ಕಾರ್ಯಸನ್ನದ್ಧವಾಗುವುದು ನಮ್ಮ ಕೆಲಸವಷ್ಟೆ.ಮತದಾನ ಅಧಿಕಾರಿಗಳಿಗೆ ತರಬೇತಿ ನೀಡಿದ ನಂತರ, ಜಿಲ್ಲಾ ಮಟ್ಟದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
Advertisement