ಕಾಂಗ್ರೆಸ್, ಬಿಜೆಪಿ ಜತೆ ಹಂಗಿನ ಸರ್ಕಾರ ಬೇಡ: ಕುಮಾರಸ್ವಾಮಿ

ಕಾಂಗ್ರೆಸ್ ಹಾಗೂ ಬಿಜೆಪಿಯ ಜತೆ ಹಂಗಿನ ಸರ್ಕಾರ ರಚಿಸುವ ಉದ್ದೇಶವಿಲ್ಲ. ಬದಲಾಗಿ 113 ಸ್ಥಾನಗಳನ್ನು ಗೆದ್ದು ಸ್ವತಂತ್ರವಾಗಿ....
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಕಾಂಗ್ರೆಸ್ ಹಾಗೂ ಬಿಜೆಪಿಯ ಜತೆ ಹಂಗಿನ ಸರ್ಕಾರ ರಚಿಸುವ ಉದ್ದೇಶವಿಲ್ಲ. ಬದಲಾಗಿ 113 ಸ್ಥಾನಗಳನ್ನು ಗೆದ್ದು ಸ್ವತಂತ್ರವಾಗಿ ಹಂಗಿಲ್ಲದ ಜೆಡಿಎಸ್ ಸರ್ಕಾರ ರಚಿಸಬೇಕೆಂಬುದು ನನ್ನ ಉದ್ದೇಶ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಬುಧವಾರ ಹೇಳಿದ್ದಾರೆ.
ಇಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಹಿರಿಯ ನಾಗರಿಕರೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಕುಮಾರಸ್ವಾಮಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 50 ಸ್ಥಾನಗಳನ್ನು ಗೆದ್ದು ಸಮ್ಮಿಶ್ರ ಸರ್ಕಾರ ರಚಿಸುವ ಉದ್ದೇಶ ಇಲ್ಲ. ಈ ಬಾರಿ 100ಕ್ಕೆ 100ರಷ್ಟು ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
ಜೆಡಿಎಸ್‌ಗೆ 40ರಿಂದ 50 ಸ್ಥಾನ, ಕಾಂಗ್ರೆಸ್‌ಗೆ 90 ರಿಂದ 100, ಬಿಜೆಪಿಗೆ 80 ಎಂದೆಲ್ಲಾ ಸಮೀಕ್ಷೆಗಳು ಬರುತ್ತಿವೆ. ಆದರೆ ಮಾಧ್ಯಮಗಳ ಸಮೀಕ್ಷೆಗಳು, ಜ್ಯೋತಿಷಿಗಳು ಏನೆ ಹೇಳಿಕೊಳ್ಳಲಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ನಾನು ಮುಖ್ಯಮಂತ್ರಿ ಆದ ತಕ್ಷಣ ವಿಧಾನಸೌಧದ ಮುಂಭಾಗದಲ್ಲಿ ಹಾಕಿರುವ ಕಬ್ಬಿಣದ ಸರಳುಗಳನ್ನು ಕಿತ್ತು ಹಾಕಿಸುತ್ತೇನೆ. ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ ರಾಜ್ಯದ ಜನತೆ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿ ಕೊಡುತ್ತೇನೆ. ಅಲ್ಲದೆ ಮುಖ್ಯಮಂತ್ರಿಗಳ ಷರ್ಟ್ ಹಿಡಿದು ಇದು ನನ್ನ ಸಮಸ್ಯೆ ಬಗೆಹರಿಸಿ ಎಂದು ಹೇಳುವ ಅಧಿಕಾರವನ್ನು ಜನಸಾಮಾನ್ಯರಿಗೆ ನೀಡುತ್ತೇನೆ. ಹೀಗಾಗಿ ಜೆಡಿಎಸ್ ಪಕ್ಷಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಎಚ್ ಡಿಕೆ ಮನವಿ ಮಾಡಿದರು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಸರ್ಕಾರ ಜನಸಾಮಾನ್ಯರ ಹಣವನ್ನು ಜಾಹೀರಾತಿನ ಹೆಸರಿನಲ್ಲಿ ದುಂದು ವೆಚ್ಚ ಮಾಡುತ್ತಿದೆ. ಅದೇ ಹಣವನ್ನು ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಬಹುದಿತ್ತು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com