ಮೈಸೂರು: ನಮ್ಮ ರಾಜ್ಯದ ಹಣಕಾಸಿನ ಸ್ಥಿತಿಗತಿ ಬಗ್ಗೆ ಲೆಕ್ಕ ಕೇಳಲು ಅಮಿತ್ ಶಾ ಯಾರು? ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಕೇಂದ್ರಕ್ಕೆ ಗುಜರಾತ್ ಸರ್ಕಾರ ಲೆಕ್ಕ ನೀಡಿತ್ತೇ? ಹಣಕಾಸು ವ್ಯವಸ್ಥೆ ಬಗ್ಗೆ ಅವರಿಗೇನು ಗೊತ್ತು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಬಿಜೆಪಿ ಅಧ್ಯಕ್ಷರಿಗೆ ತಿರುಗೇಟು ನೀಡಿದ್ದಾರೆ.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3 ಲಕ್ಷ ಕೋಟಿ ರುಪಾಯಿ ನೀಡಿದ್ದು, ಆ ಹಣ ಯಾವ ಹಳ್ಳಿಗೆ ತಲುಪಿದೆ? ಎಂಬ ಅಮಿತ್ ಶಾ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ನಮ್ಮಿಂದ ಸಂಗ್ರಹವಾದ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ನಮಗೆ ನೀಡಿದೆ ಅಷ್ಟೆ. ಅದರಲ್ಲೂ 11 ಸಾವಿರ ಕೋಟಿ ರುಪಾಯಿ ಕಡಿಮೆ ನೀಡಿದೆ. ಆ ಲೆಕ್ಕವನ್ನು ನಾನು ವಿಧಾನಮಂಡಲ ಹಾಗೂ ರಾಜ್ಯದ ಜನರಿಗೆ ನೀಡುತ್ತೇನೆ. ಅದನ್ನು ಕೇಳಲು ಅಮಿತ್ ಶಾ ಎಂದು ಮರು ಪ್ರಶ್ನಿಸಿದರು.
ಇದೇ ವೇಳೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಬರ ಪರಿಹಾರ ಅನುದಾನ ನೀಡುವಲ್ಲಿ ಕೇಂದ್ರ ತಾರತಮ್ಯ ನೀತಿ ಅನುಸರಿಸುತ್ತಿದೆ. ನಮಗೆ ಕೇವಲ 1500 ಕೋಟಿ ರುಪಾಯಿ ನೀಡಿ, ಮಹಾರಾಷ್ಟ್ರ, ಗುಜರಾತ್ ಗೆ 3 ಸಾವಿರ ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡಿದೆ ಎಂದರು.
ನಿನ್ನೆ ಹೊಳಲ್ಕೆರೆಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ್ದ ಅಮಿತ್ ಶಾ,ಕರ್ನಾಟಕದ ವಿವಿಧ ಯೋಜನೆಗಳಿಗಾಗಿ ಕೇಂದ್ರ ಸರ್ಕಾರ ಒಟ್ಟು 3 ಲಕ್ಷ ಕೋಟಿ ರುಪಾಯಿ ನೀಡಿದೆ. ಆದರೆ ಈ ಹಣ ಎಲ್ಲಿ ಹೋಯ್ತು? ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.