ಸಂಗ್ರಹ ಚಿತ್ರ
ರಾಜಕೀಯ
ಮಹದಾಯಿಗಾಗಿ ಕರ್ನಾಟಕ ಬಂದ್ ರಾಜಕೀಯ ಪ್ರೇರಿತ; ಸಿಎಂ ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಟೀಕೆ
ಮಹದಾಯಿ ನೀರಿಗಾಗಿ ನಡೆಯುತ್ತಿರುವ ಕರ್ನಾಟಕ ಬಂದ್ ರಾಜಕೀಯ ಪ್ರೇರಿತವಾಗಿದ್ದು, ಬಂದ್ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಕುತಂತ್ರ ಅಡಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಸಂಸದ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಹುಬ್ಬಳ್ಳಿ: ಮಹದಾಯಿ ನೀರಿಗಾಗಿ ನಡೆಯುತ್ತಿರುವ ಕರ್ನಾಟಕ ಬಂದ್ ರಾಜಕೀಯ ಪ್ರೇರಿತವಾಗಿದ್ದು, ಬಂದ್ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಕುತಂತ್ರ ಅಡಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಸಂಸದ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮಹದಾಯಿ ನದಿ ನೀರಿಗಾಗಿ ಮತ್ತು ಕಳಸಾ ಬಂಡೂರಿ ನಾಲಾ ಯೋಜನೆ ಬೆಂಬಲಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಕರ್ನಾಟಕ ಬಂದ್ ಕುರಿತಂತೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಎಸ್ ಯಡಿಯೂರಪ್ಪ ಅವರು, ಪ್ರಸ್ತುತ ನಡೆಯುತ್ತಿರುವ ಕರ್ನಾಟಕ ಬಂದ್ ರಾಜ್ಯ ಸರ್ಕಾರದ ಪ್ರಾಯೋಜಿತ ಬಂದ್ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುತಂತ್ರದಿಂದ ಬಂದ್ ನಡೆಯುತ್ತಿದ್ದು, ನೀರಿನ ವಿಚಾರ ಮುಂದಿಟ್ಟುಕೊಂಡು ಸಿದ್ದರಾಮಯ್ಯ ರಾಜಕೀಯ ದೊಂಬರಾಟ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಅಂತೆಯೇ ಮಹದಾಯಿ ನದಿ ನೀರು ವಿಚಾರದಲ್ಲಿ ಈಗಲೂ ನಾನು ಕರ್ನಾಟಕದ ಹಿತಾಸಕ್ತಿಗೆ ಬದ್ಧನಾಗಿದ್ದು, ಈ ಹಿಂದೆಯೂ ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಮುಂದೆಯೂ ನನ್ನ ಹೋರಾಟ ಮುಂದುವರೆಸುತ್ತೇನೆ. ನಾನು ಕಳೆದೊಂದು ವರ್ಷದಿಂದ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತಿದ್ದೇನೆ. ಆದರೆ ಅವರು ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ನಾನು ಈಗಲೂ ಹೇಳುತ್ತಿದ್ದೇನೆ, ಮೊದಲು ನೀವು ಗೋವಾ ಮತ್ತು ಮಹಾರಾಷ್ಟ್ರದ ವಿಪಕ್ಷ ನಾಯಕರ ಮನವೊಲಿಸಿ. ನಾನು ಆ ರಾಜ್ಯಗಳ ಆಡಳಿತ ಪಕ್ಷ ಬಿಜೆಪಿ ಮುಖ್ಯಮಂತ್ರಿಗಳ ಮನವೊಲಿಸಿ ಕುಡಿಯುವ ನೀರನ್ನು ನಿಶ್ಚಿತವಾಗಿ ತಂದೊಪ್ಪಿಸುತ್ತೇನೆ ಎಂದು ಸವಾಲು ಹಾಕಿದರು.
ಅಂತೆಯೇ ರೈತರ ಸಮಸ್ಯೆ ಮತ್ತು ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಮನವಿ ಮಾಡಿದ ಬಿಎಸ್ ವೈ, ಈ ಹಿಂದೆ ನಿಮ್ಮ ಪಕ್ಷದ ಮುಖ್ಯಸ್ಥರಾದ ಸೋನಿಯಾ ಗಾಂಧಿ ಅವರು ಗೋವಾ ಚುನಾವಣೆ ವೇಳೆ ಕರ್ನಾಟಕಕ್ಕೆ ಹನಿ ನೀರನ್ನೂ ಬಿಡುವುದಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಅಮಿತ್ ಶಾ ರ‍್ಯಾಲಿಗೆ ತೊಂದರೆ ಇಲ್ಲ, ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಾಗ ಬಂದ್
ಇನ್ನು ಕರ್ನಾಟಕ ಬಂದ್ ನಿಂದಾಗಿ ಬಿಜೆಪಿ ಪಕ್ಷದ ಪರಿವರ್ತನಾ ರ‍್ಯಾಲಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಹೇಳಿದ ಬಿಎಸ್ ವೈ, ಅಮಿತ್ ಶಾ ಅವರು ರಾಜ್ಯ ಕ್ಕೆ ಆಗಮಿಸುವ ವೇಳೆಯಲ್ಲೇ ಬಂದ್ ಗೆ ಕರೆ ನೀಡಿ ಸಮಾವೇಶವನ್ನು ವಿಫಲಗೊಳಿಸಲು ಸಿಎಂ ಸಿದ್ದರಾಮಯ್ಯ ಯತ್ನಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಅಮಿತ್ ಶಾ ಅವರ ಸಮಾವೇಶ ವಿಫಲವಾಗುವುದಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಅಲ್ಲವಾದರೂ ನಮ್ಮ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುತ್ತಾರೆ. ಅಂತೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಪ್ರತೀ ಜಿಲ್ಲೆಗಳಲ್ಲೂ ನೂರಕ್ಕೆ ನೂರು ಬಂದ್ ನಡೆಸುತ್ತೇವೆ. ಮಹದಾಯಿ ವಿಚಾರದಲ್ಲಿ ಅವರ ನಿಲುವೇನು ಎನ್ನುವುದನ್ನು ಸ್ಪಷ್ಟೀಕರಿಸಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ