ನಾನು ಓಡಿಹೋಗುವುದಿಲ್ಲ, ಜನತೆಗೆ ಕೊಟ್ಟ ಮಾತನ್ನು ಈಡೇರಿಸುತ್ತೇನೆ: ಹೆಚ್ ಡಿ ಕುಮಾರಸ್ವಾಮಿ

ರೈತರ ಸಾಲಮನ್ನಾಗೆ ಮಿತಿಯನ್ನು ಹೇರಿರುವುದಕ್ಕೆ ಮತ್ತು ಬಜೆಟ್ ನಲ್ಲಿ ತಮ್ಮ ಚುನಾವಣಾಪೂರ್ವ ...
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ರೈತರ ಸಾಲಮನ್ನಾಗೆ ಮಿತಿಯನ್ನು ಹೇರಿರುವುದಕ್ಕೆ ಮತ್ತು ಬಜೆಟ್ ನಲ್ಲಿ ತಮ್ಮ ಚುನಾವಣಾಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿರುವ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದಿರುವುದಕ್ಕೆ ವಿರೋಧ ಪಕ್ಷದಿಂದ ಮತ್ತು ಸಮಾಜದ ಒಂದು ವರ್ಗದ ಜನರಿಂದ ಮತ್ತು ಮಾಧ್ಯಮಗಳಿಂದಲೂ ಟೀಕೆಗಳನ್ನು ಎದುರಿಸುತ್ತಿರುವ ಬಗ್ಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ರಾಜ್ಯದ ಜನತೆಗೆ ಕೊಟ್ಟ ಮಾತಿನಿಂದ  ಹಿಂದೆ ಸರಿಯುವುದಿಲ್ಲ, ಪಲಾಯನ ಕೂಡ ಮಾಡುವುದಿಲ್ಲ. ನಾನು ಪಲಾಯನವಾದಿಯಲ್ಲ, ಒಂದು ತಿಂಗಳ ಹಿಂದೆಯಷ್ಟೇ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ನನಗೆ ಸಮಯ ಕೊಡಿ, ನನ್ನ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇನೆ ಎಂದು ಹೆಚ್ ಡಿ ಕುಮಾರಸ್ವಾಮಿ ನಿನ್ನೆ ವಿಧಾನಸಭೆಯಲ್ಲಿ ಹೇಳಿದ್ದಾರೆ.

ನಿನ್ನೆ ಅವರು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಪ್ರಸ್ತಾವನೆ ಮೇಲಿನ ಚರ್ಚೆಯಲ್ಲಿ  ಮಾತನಾಡಿ, ರೈತರ, ನೇಕಾರರ ಮತ್ತು ಮಹಿಳಾ ಸ್ವಸಹಾಯ ಗುಂಪುಗಳ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ನಾನು ಭರವಸೆ ಕೊಟ್ಟಿದ್ದು ಹೌದು, ಹಿರಿಯ ವ್ಯಕ್ತಿಗಳಿಗೆ ತಿಂಗಳು 6 ಸಾವಿರ ಮಾಸಾಶನ ಮತ್ತು ಸರ್ಕಾರಿ ಇಲಾಖೆಗಳಲ್ಲಿರುವ ಗುತ್ತಿಗೆ ಆಧಾರಿತ ನೌಕರರ ಸೇವೆ ಖಾಯಮಾತಿ ಮಾಡುವುದಾಗಿಯೂ ಭರವಸೆ ಕೊಟ್ಟಿದ್ದೆ. ಆದರೆ ನಾನು ರಾತ್ರಿ ಕಳೆದು ಹಗಲಾಗುವುದರೊಳಗೆ ಎಲ್ಲಾ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಒಂದು ತಿಂಗಳ ಹಿಂದಷ್ಟೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ನಾನು ಕೊಟ್ಟ ಮಾತಿನಿಂದ ಪಲಾಯನವಾಗುವುದಿಲ್ಲ. ನನಗೆ ಸ್ವಲ್ಪ ಸಮಯ ಕೊಡಿ. ಬದಲಾವಣೆ ತರುತ್ತೇನೆ. ನನ್ನ ಭರವಸೆಗಳನ್ನೆಲ್ಲಾ ಈಡೇರಿಸುತ್ತೇನೆ. ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತೇನೆ ಎಂದು ಮಾತು ಕೊಟ್ಟಿದ್ದಾರೆ.

ಕೊಟ್ಟಿರುವ ಭರವಸೆಗಳನ್ನು ಒಂದೇ ಹಂತದಲ್ಲಿ ಈಡೇರಿಸಲು ಸಾಧ್ಯವಿಲ್ಲ, ಹಂತ ಹಂತವಾಗಿ ಈಡೇರಿಸುವುದಾಗಿ ಹೇಳಿದರು. ಇನ್ನು ತಮ್ಮ ಬಜೆಟ್ ಅಣ್ತಮ್ಮ ಬಜೆಟ್, ತಂದೆ-ಮಗನ ಬಜೆಟ್, ಹಾಸನ-ಮಂಡ್ಯ ಬಜೆಟ್ ಎಂದು ಮಾಧ್ಯಮಗಳಲ್ಲಿ ಬಂದ ಟೀಕೆಗಳಿಗೆ ಅವರು ಪ್ರತಿಕ್ರಿಯಿಸಿ, ಇದಕ್ಕೆಲ್ಲ ತಾವು ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಉತ್ತರಿಸುವುದಾಗಿ ಹೇಳಿದರು.

ನಾನು ನನ್ನ ಮಾತಿಗೆ ಬದ್ಧನಾಗಿದ್ದೇನೆ. ಉತ್ತರ ಕರ್ನಾಟಕ ಭಾಗದ ಜನರಿಗೆ ತಾರತಮ್ಯ ಮಾಡುತ್ತೇನೆ ಮತ್ತು ರೈತರಿಗೆ ಮೋಸ ಮಾಡಿದ್ದೇನೆ ಎನ್ನುತ್ತಾರೆ.  ಜನರನ್ನು ಸರ್ಕಾರದ ವಿರುದ್ಧ ದಾರಿತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆಲ್ಲವನ್ನೂ ಸದನದಲ್ಲಿ ನಾನು ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಸೂಕ್ತ ಉತ್ತರ ನೀಡುತ್ತೇನೆ ಎಂದರು.

ಬಹುಮತ ಸಿಕ್ಕಿಲ್ಲ: ಜೆಡಿಎಸ್ ಹಲವು ಉತ್ತಮ ಚುನಾವಣಾ ಪೂರ್ವ ಭರವಸೆಗಳನ್ನು ನೀಡಿದ್ದರೂ ರಾಜ್ಯದ ಜನತೆ ಬಹುಮತ ನೀಡಿಲ್ಲ.ಜನರಿಗೆ ನಮ್ಮ ಮೇಲೆ ನಂಬಿಕೆಯಿದ್ದರೆ 113 ಸ್ಥಾನಗಳನ್ನು ನೀಡಿ ಜೆಡಿಎಸ್ ನ್ನು ಗೆಲ್ಲಿಸಬೇಕಾಗಿತ್ತು. ನಮ್ಮ ಭರವಸೆಗಳನ್ನು ಜನತೆ ತಿರಸ್ಕರಿಸಿ ಕೇವಲ 38 ಸ್ಥಾನಗಳನ್ನು ನೀಡಿದ್ದಾರೆ. ಹೀಗಾಗಿ ಇಂದು ಸಮ್ಮಿಶ್ರ ಸರ್ಕಾರ ರಚಿಸಬೇಕಾಗಿ ಬಂದು ನಾನು ಮುಖ್ಯಮಂತ್ರಿಯಾಗಬೇಕಾಯಿತು. ಆದರೂ ನಾನು ನನ್ನ ಭರವಸೆಗಳಿಗೆ ಬದ್ಧನಾಗಿದ್ದೇನೆ ಎಂದು ಕುಮಾರಸ್ವಾಮಿ ಪುನರುಚ್ಛರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com