ಹಾಸನ ಲೋಕಸಭೆ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟು ಕೊಡಬೇಡಿ: ಕಾಂಗ್ರೆಸ್ ನಾಯಕರ ಒತ್ತಾಯ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲು ...
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ನಿಲುವು ಹಾಸನ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಇರಿಸುಮುರಿಸು ಉಂಟುಮಾಡುತ್ತಿದೆ. ನಿನ್ನೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ನಡೆದ ಸಭೆಯಲ್ಲಿ ಕಾಂಗ್ರೆಸ್ ನ ಹಾಸನ ಜಿಲ್ಲಾ ನಾಯಕರು ಲೋಕಸಭೆ ಸೀಟನ್ನು ಜೆಡಿಎಸ್ ಗೆ ಬಿಟ್ಟುಕೊಡದಂತೆ ಕೇಳಿದ್ದಾರೆ ಎನ್ನಲಾಗಿದೆ.

ಇದಕ್ಕೆ ದಿನೇಶ್ ಗುಂಡೂರಾವ್, ಸೀಟು ಹಂಚಿಕೆ ನಿರ್ಧಾರ ಕಾಂಗ್ರೆಸ್ ಹೈಕಮಾಂಡ್ ಗೆ ಬಿಟ್ಟಿದ್ದಾಗಿದ್ದು ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಜೆಡಿಎಸ್ ಸದಸ್ಯರೊಂದಿಗೆ  ಸೇರಿಕೊಂಡು ಚುನಾವಣೆಗೆ ತಳಮಟ್ಟದಿಂದ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಸನ ಮತ್ತು ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಸಭೆಯನ್ನು ನಿನ್ನೆ ನಡೆಸಿದ್ದರು. ಸಭೆಯಲ್ಲಿ ಮಾಜಿ ಸಚಿವ ಎ ಮಂಜು ಮತ್ತು ಜಿಲ್ಲೆಯ ಕಾಂಗ್ರೆಸ್ ಹಿರಿಯ ನಾಯಕರು ಭಾಗವಹಿಸಿದ್ದರು. ಸಭೆಯಲ್ಲಿ ಮಂಡ್ಯ ಮತ್ತು ಹಾಸನ ಜಿಲ್ಲೆಗಳ ಲೋಕಸಭೆ ಸ್ಥಾನಗಳನ್ನು ಜೆಡಿಎಸ್ ಗೆ ಬಿಟ್ಟುಕೊಡದಂತೆ ಬಿ ಶಿವರಾಮ್, ಹೆಚ್ ಎಂ ವಿಶ್ವನಾಥ್, ಎಸ್ ಎಂ ಆನಂದ್ ಮೊದಲಾದವರು ಒತ್ತಾಯಿಸಿದ್ದಾರೆ.

ಈ ಜಿಲ್ಲೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಪ್ರಭಾವ ಉತ್ತಮವಾಗಿದ್ದು, ಜೆಡಿಎಸ್ ಗೆ ಸ್ಥಾನ ಬಿಟ್ಟುಕೊಟ್ಟರೆ ಕಾಂಗ್ರೆಸ್ ನ ವೋಟ್ ಬ್ಯಾಂಕ್ ಕಳೆದುಹೋಗಬಹುದು ಎಂಬ ಆತಂಕ ಕಾಂಗ್ರೆಸ್ ನಾಯಕರದ್ದಾಗಿದೆ. ಈ ಎರಡೂ ಜಿಲ್ಲೆಗಳಲ್ಲಿ ನಮ್ಮ ಪಕ್ಷ ಪ್ರಭಾವಶಾಲಿಯಾಗಿದ್ದು ಒಂದು ಜಿಲ್ಲೆಯಲ್ಲಾದರೂ ಕಾಂಗ್ರೆಸ್ ಸ್ಪರ್ಧಿಸಬೇಕು ಎಂಬುದು ನಮ್ಮ ಆಸೆಯಾಗಿದೆ ಎನ್ನುತ್ತಾರೆ ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್.

ಕಳೆದ ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದ ಎ ಮಂಜು 50 ಸಾವಿರ ಮತಗಳ ಅಂತರಗಳಿಂದ ಸೋತಿದ್ದರು. ಆದ್ದರಿಂದ ಈ ಬಾರಿ ಅವರಿಗೆ ಗೆಲ್ಲುವ ಅವಕಾಶಗಳು ಹೆಚ್ಚಿದೆ ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com