ಪ್ರತ್ಯೇಕ ರಾಜ್ಯ ರಚನೆಗೆ ಒತ್ತಾಯ; ಶ್ರೀರಾಮುಲು ಹೇಳಿಕೆಗೆ ಬಿಜೆಪಿ ನಾಯಕರಲ್ಲಿಯೇ 'ಆಕ್ಷೇಪ'

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿಗೆ ಕಿಚ್ಚು ಹಚ್ಚಿದ ಬಿಜೆಪಿ ಶಾಸಕ ಬಿ. ಶ್ರೀರಾಮುಲು ಅವರ ಹೇಳಿಕೆಗೆ...
ಸುರೇಶ್ ಕುಮಾರ್, ಶ್ರೀರಾಮುಲು(ಸಂಗ್ರಹ ಚಿತ್ರ)
ಸುರೇಶ್ ಕುಮಾರ್, ಶ್ರೀರಾಮುಲು(ಸಂಗ್ರಹ ಚಿತ್ರ)

ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿಗೆ ಕಿಚ್ಚು ಹಚ್ಚಿದ ಬಿಜೆಪಿ ಶಾಸಕ ಬಿ. ಶ್ರೀರಾಮುಲು ಅವರ ಹೇಳಿಕೆಗೆ ಬಿಜೆಪಿ ನಾಯಕರಲ್ಲಿಯೇ ಆಕ್ಷೇಪ ವ್ಯಕ್ತವಾಗಿದೆ. ನಿನ್ನೆ ಸಂಸದೆ ಶೋಭಾ ಕರಂದ್ಲಾಜೆ ಪ್ರತ್ಯೇಕ ರಾಜ್ಯ ರಚನೆ ಬೇಡಿಕೆ ಸರಿಯಲ್ಲ ಎಂದಿದ್ದರೆ ಇಂದು ಬೆಜೆಪಿಯ ಮತ್ತೊಬ್ಬ ಪ್ರಮುಖ ನಾಯಕ ಶಾಸಕ ಸುರೇಶ್ ಕುಮಾರ್, ಕರ್ನಾಟಕವನ್ನು ವಿಭಜಿಸುವ ಮಾತು ಸರಿಯಲ್ಲ, ಪ್ರತ್ಯೇಕ ರಾಜ್ಯ ಯಾವ ದೃಷ್ಟಿಯಿಂದಲೂ ಒಳಿತಲ್ಲ. ವಿವೇಚನೆಯಿಂದ ಕೂಡಿದ ಮಾತುಗಳನ್ನು ರಾಜಕೀಯ ನಾಯಕರಿಂದ ನಾಡು ಅಪೇಕ್ಷಿಸುತ್ತದೆ ಎಂದು ಹೇಳಿದ್ದಾರೆ.

ಇನ್ನು, ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ರಚನೆಗೆ ಒತ್ತಾಯಿಸಿ ಆಗಸ್ಟ್ 2ರಂದು ಕರೆ ನೀಡಲಾಗಿರುವ ಉತ್ತರ ಕರ್ನಾಟಕ ಬಂದ್ ಗೆ ಕೆಲವು ಸಂಘಟನೆಗಳು ಮತ್ತು ಸಾರ್ವಜನಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿರುವವರು ಕಳೆದ ಗುರುವಾರದಿಂದ #KarnatakaVonde ಎಂಬ ಹ್ಯಾಶ್ ಟಾಗ್ ನೊಂದಿಗೆ ಟ್ವೀಟ್ ಮಾಡುತ್ತಿದ್ದಾರೆ. ಅದೀಗ ಟ್ರೆಂಡ್ ಆಗಿದೆ.

ರಾಜಕೀಯ ನಾಯಕರಾದ ಶ್ರೀರಾಮುಲು, ಉಮೇಶ್ ಕತ್ತಿ ಮೊದಲಾದವರು ಕರೆ ನೀಡಲಾಗಿರುವ ಬಂದ್ ಗೆ ಸಾರ್ವಜನಿಕವಾಗಿ ಬೆಂಬಲ ಸೂಚಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ವಿರುದ್ಧ ಹರಿಹಾಯುತ್ತಿದ್ದಾರೆ. ಕನ್ನಡದಲ್ಲಿ ಡಬ್ಬಿಂಗ್ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದ, ಹಿಂದಿ ಭಾಷೆ ಹೇರಿಕೆ ವಿರೋಧಿ ಸಂಘಟನೆಗಳು ಮತ್ತು ಕಾರ್ಯಕರ್ತರು ಪ್ರತ್ಯೇಕ ರಾಜ್ಯ ರಚನೆಯ ಒತ್ತಾಯವನ್ನು ವಿರೋಧಿಸಿ ಆನ್ ಲೈನ್ ನಲ್ಲಿ ಅಖಂಡ ಕರ್ನಾಟಕಕ್ಕೆ ಒತ್ತಾಯಿಸುತ್ತಿದ್ದಾರೆ. ಉತ್ತರ ಕರ್ನಾಟಕಕ್ಕೆ ಪ್ರತ್ಯೇಕತೆ ಕೂಗಿಗೆ ಬಿಜೆಪಿ ಮತ್ತು ಆರ್ ಎಸ್ಎಸ್ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ.

 ಕೋನರೆಡ್ಡಿ ಹೊರತುಪಡಿಸಿ ಮಹಾದಾಯಿ ನದಿ ನೀರು ಹಂಚಿಕೆ ಬಗ್ಗೆ ಮಾತನಾಡಿದ ಒಬ್ಬ ಶಾಸಕ ಅಥವಾ ಸಂಸದರನ್ನು ಹೆಸರಿಸಿ, ಗೋವಾ ರಾಜ್ಯದ ಇಬ್ಬರು ಸಂಸದರ ವಿರುದ್ಧ ಕರ್ನಾಟಕದ 28 ಸಂಸದರಿಗೆ ಸಂಸತ್ತಿನಲ್ಲಿ ಮಾತನಾಡಲಾಗುತ್ತಿಲ್ಲ. ಹೀಗಿರುವಾಗ ಪ್ರತ್ಯೇಕ ರಾಜ್ಯ ರಚನೆಯಿಂದ 12ರಿಂದ 13 ಸಂಸದರು ಸಾಧಿಸುವುದಾದರೂ ಏನಿದೆ? ಆಂಧ್ರ ಪ್ರದೇಶ ಸರ್ಕಾರ ವೇತನ ನೀಡಲು ಎಷ್ಟೊಂದು ಹರಸಾಹಸಪಡುತ್ತಿದೆ ಎಂಬುದನ್ನು ನೋಡಿ, ಪ್ರತ್ಯೇಕತೆಯೆಂದರೆ ಸಂಸತ್ತಿನಲ್ಲಿ ಕಡಿಮೆ ಅಧಿಕಾರ ಮತ್ತು ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಕಡಿಮೆ ಅವಕಾಶ ಸಿಗುತ್ತದೆ. #Karnataka#Vonde ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.

ಶ್ರೀರಾಮುಲು ಹೇಳಿಕೆ ನಂತರ ಟ್ವೀಟಿಗರ ಆಕ್ರೋಶ ಇನ್ನೂ ಹೆಚ್ಚಾಗಿದೆ. ಶ್ರೀರಾಮುಲು ಅವರು ಮತಗಳನ್ನು ಸೆಳೆಯಲು ಪ್ರತ್ಯೇಕ ರಾಜ್ಯ ರಚನೆಗೆ ಪ್ರಯತ್ನಿಸುತ್ತಿದ್ದಾರೆ, ಮೋದಿಯವರೇ, ಅಮಿತ್ ಶಾ, ಬಿಎಸ್ ವೈಯವರೇ, ಕೆಲವರು ಧರ್ಮ ಒಡೆಯಲು ಹೋಗಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಅಂತಹದ್ದೇ ಪರಿಸ್ಥಿತಿ ಮುಂದೆ ನಿಮ್ಮ ಪಕ್ಷಕ್ಕೆ ಕೂಡ ಬರಬಹುದು ಎಂದು ಮತ್ತೊಬ್ಬರು ಟ್ವೀಟ್ ನಲ್ಲಿ ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com