ಮೈತ್ರಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ

ನೂತನ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸಂಪುಟ ರಚನೆ, ಖಾತೆ ಹಂಚಿಕೆ ಕಸರತ್ತು ...
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ

ಮೈಸೂರು: ನೂತನ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸಂಪುಟ ರಚನೆ, ಖಾತೆ ಹಂಚಿಕೆ ಕಸರತ್ತು ಮುಗಿಯುತ್ತಾ ಬಂದಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಸರ್ಕಾರಕ್ಕೆ ಮತ್ತೊಂದು ತಲೆನೋವಾಗುವ ಸಾಧ್ಯತೆಯಿದೆ. ಚುನಾವಣೆ ಪೂರ್ವ ಪ್ರಚಾರ ಸಂದರ್ಭದಲ್ಲಿ ಹಾವು-ಮುಂಗುಸಿಗಳಂತೆ ಕಿತ್ತಾಡಿದ ರಾಜಕೀಯ ನಾಯಕರು ಹಲವು ಜಿಲ್ಲೆಗಳಲಿದ್ದಾರೆ. ಅದರಲ್ಲೂ ಹಳೆ ಮೈಸೂರು ಭಾಗದಲ್ಲಿ ಇದು ಹೆಚ್ಚಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಎರಡೂ ಪಕ್ಷಗಳ ನಾಯಕರಲ್ಲಿ ಮತ್ತೆ ಭಿನ್ನಾಭಿಪ್ರಾಯಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆಯಿದೆ ಮುಖ್ಯವಾಗಿ ಎಂಟರಿಂದ 9 ಜಿಲ್ಲೆಗಳಲ್ಲಿ.

ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ನಿಲುವಿನಲ್ಲಿ ಸಡಿಲತೆ ತೋರಿಸದಿದ್ದರೆ ಮತ್ತು ಕೊಡು ಕೊಳ್ಳುವ ಕ್ರಮ ಅನುಸರಿಸದಿದ್ದರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರಿಗೆ ಕಷ್ಟವಾಗಲಿದೆ. ಜಿಲ್ಲಾ ಉಸ್ತುವಾರಿಯಾಗಿರುವ ಸಚಿವರುಗಳಿಗೆ ಜಿಲ್ಲಾಧಿಕಾರಿಗಲು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಇತರ ಉನ್ನತ ಅಧಿಕಾರಿಗಳ ನೇಮಕದಲ್ಲಿ ಪ್ರಮುಖ ವ್ಯಕ್ತಿಯಾಗಿರುತ್ತಾರೆ. ಸ್ಥಳೀಯ ಕಾರ್ಯಕರ್ತರು ತಮ್ಮ ಕೆಲಸ ಮಾಡಿಸಿಕೊಳ್ಳಲು ಸಚಿವರ ಮೊರೆ ಹೋಗುತ್ತಾರೆ. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಅದು ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮಕ್ಕೆ ಎಡೆ ಮಾಡಿಕೊಡುತ್ತದೆ.

ರಾಮನಗರ, ಮೈಸೂರು, ಕೋಲಾರ, ತುಮಕೂರು ಮತ್ತು ಹುಬ್ಬಳ್ಳಿ-ಧಾರವಾಡಗಳ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಎರಡೂ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಕ್ಕೆ ಎಡೆಮಾಡಿಕೊಡುವ ಸಾಧ್ಯತೆಯಿದೆ.

ಮೈಸೂರಿನಲ್ಲಿ ಜಿಟಿ ದೇವೇಗೌಡರು ಜಿಲ್ಲಾ ಉಸ್ತುವಾರಿ ಸಚಿವ ಹುದ್ದೆ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಸಮಾಧಾನವುಂಟುಮಾಡುವ ಸಾಧ್ಯತೆಯಿದೆ. ಜೆಡಿಎಸ್ ನ ಇನ್ನೊಬ್ಬ ಸಂಭಾವ್ಯ ಸಚಿವ ಎ ಎಚ್ ವಿಶ್ವನಾಥ್ ಅವರು ಮತ್ತು ಸಿದ್ದರಾಮಯ್ಯನವರು ಅಷ್ಟಕಷ್ಟೆ. ವಿಶ್ವನಾಥ್ ಅವರು ತನ್ವೀರ್ ಸೇಠ್ ಜಿಲ್ಲಾ ಉಸ್ತುವಾರಿ ಸಚಿವರಾಗಬೇಕೆಂದು ಬಯಸಬಹುದು.

ಕೋಲಾರದಲ್ಲಿ ಹಿರಿಯ ಜೆಡಿಎಸ್ ನಾಯಕ ಕೆ.ಶ್ರೀನಿವಾಸ ಗೌಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಆಕಾಂಕ್ಷಿಗಳ ಮೊದಲಿಗರಾಗಿದ್ದಾರೆ. ಇಲ್ಲಿ ನಾಲ್ಕು ಸೀಟುಗಳನ್ನು ಪಡೆದುಕೊಂಡಿರುವ ಕಾಂಗ್ರೆಸ್ ಮುಖಂಡರಿಗೆ ಅಸಮಾಧಾನವುಂಟುಮಾಡಬಹುದು. ತುಮಕೂರಿನಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಜಿಲ್ಲೆಯ ಉಸ್ತುವಾರಿ ವಹಿಸಲು ಮುಂಚೂಣಿಯಲ್ಲಿದ್ದರೆ ಜೆಡಿಎಸ್ ನಿಂದ ಒಬ್ಬರು ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡಬೇಕೆಂದು ಕೇಳಬಹುದು.

ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿಯವರಿಗೆ ಸಚಿವ ಸ್ಥಾನ ನೀಡಿದರೆ ಅವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಬೇಕೆಂದು ಬಯಸಬಹುದು. ಇಲ್ಲಿ ಹಲವು ಸೀಟುಗಳನ್ನು ಗೆದ್ದಿರುವ ಕಾಂಗ್ರೆಸ್ ಧಾರವಾಡ, ಗದಗ ಮೊದಲಾದ ಜಿಲ್ಲೆಗಳನ್ನು ಬಿಟ್ಟುಕೊಡಲಿಕ್ಕಿಲ್ಲ.

ಇನ್ನು ಈ ಬಾರಿ ಹೈದರಾಬಾದ್ ಕರ್ನಾಟಕ ಮತ್ತು ಕೇಂದ್ರ ಮುಂಬೈ ಕರ್ನಾಟಕ ಪ್ರಾಂತ್ಯಗಳಲ್ಲಿಯೂ ಪ್ರಾಬಲ್ಯ ಪಡೆಯಲು ಜೆಡಿಎಸ್ ಪ್ರಯತ್ನಿಸುವ ಸಾಧ್ಯತೆಯಿದೆ.
ಮೈತ್ರಿ ಸರ್ಕಾರಗಳ ಮಧ್ಯೆ ನಿಗಮ ಮಂಡಳಿಗಳು, ಕೊರ್ಪೊರೇಷನ್ ಗಳಲ್ಲಿ ಸೀಟು ಹಂಚಿಕೆಯಲ್ಲಿ ಕೂಡ ಭಿನ್ನಾಭಿಪ್ರಾಯ ತಲೆದೋರುವ ಸಾಧ್ಯತೆಯಿದೆ. ಪ್ರಸ್ತುತ ಶೇಕಡಾ 25ರಷ್ಟು ನಿಗಮ ಮಂಡಳಿಗಳು ಮಾತ್ರ ಲಾಭ ಮಾಡಿಕೊಳ್ಳುತ್ತಿದ್ದು ಶೇಕಡಾ 75ರಷ್ಟು ನಿಗಮ ಮಂಡಳಿಗಳು ನಷ್ಟದಲ್ಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com