ದಾವಣಗೆರೆ: ಒಂದೆಡೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಹಲವು ಕಾಂಗ್ರೆಸ್ ಶಾಸಕರು ಬಂಡಾಯವೆದ್ದಿದ್ದಾರೆ. ಮತ್ತೊಂದೆಡೆ ಹಿರಿಯ ರಾಜಕಾರಣಿ, ಶಾಸಕ ಶ್ಯಾಮನೂರು ಶಿವಶಂಕರಪ್ಪ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ,.
ನಾನು ಸಚಿವ ಸ್ಥಾನ ಆಕಾಂಕ್ಷಿಯಲ್ಲ, ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ನಾನೇನೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಸಚಿವ ಸ್ಥಾನ ನೀಡುವಂತೆ ನಾನು ಯಾರನ್ನೂ ಕೇಳಿಕೊಂಡಿರಲಿಲ್ಲ. ಈ ವಿಷಯವಾಗಿ ನನ್ನೊಂದಿಗೆ ಪಕ್ಷದ ಯಾವುದೇ ನಾಯಕರೂ ಚರ್ಚಿಸಿಲ್ಲ. ಜನರ ಸೇವೆ ಮಾಡಲು ಸಚಿವ ಸ್ಥಾನವೇ ಬೇಕೆಂದೇನೂ ಇಲ್ಲ; ಬೇಕಾದಷ್ಟು ಬೇರೆ ದಾರಿಗಳೂ ಇವೆ’ ಎಂದು ಪ್ರತಿಕ್ರಿಯಿಸಿದರು.
ಇದನ್ನು ಬಿಟ್ಟು ಮಾಡಲು ಬೇಕಾದಷ್ಟು ಕೆಲಸಗಳಿವೆ. ಜನ ನನ್ನನ್ನು ಆರಿಸಿ ಕಳುಹಿಸಿದ್ದಾರೆ. ಸಚಿವ ಸ್ಥಾನ ನೀಡದಿದ್ದರೆ, ಶಾಸಕನಾಗಿಯೇ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.
ತಮಗೆ ಸಚಿವ ಸ್ಥಾನ ನೀಡುವಂತೆ ಕೆಲ ಸ್ವಾಮೀಜಿಗಳು ಒತ್ತಾಯಿಸುತ್ತಿರುವ ಬಗ್ಗೆ ಕೇಳಿದಾಗ, ‘ಸ್ವಾಮೀಜಿ ಶಿಫಾರಸು ಮಾಡಿದರೆ ಆ ಸ್ಥಾನ ನನ್ನಿಂದ ಇನ್ನಷ್ಟು ದೂರ ಹೋಗಲಿದೆ. ಸಚಿವ ಸ್ಥಾನ ಬಂದರೆ ಬರಲಿ; ಇಲ್ಲ ಎಂದರೆ ಹಾಗೆಯೇ ಕೆಲಸ ಮಾಡುತ್ತೇನೆ’ ಎಂದು ನಗೆ ಬೀರಿದರು.