ಚಾಮುಂಡೇಶ್ವರಿ ಜನ ನನ್ನ ಜೊತೆ ನಿಲ್ಲಲಿಲ್ಲ, ಬಿಜೆಪಿಗೂ ನಾನು ಕೃತಜ್ಞನಾಗಿದ್ದೇನೆ: ಸಿದ್ದರಾಮಯ್ಯ

ಚಾಮುಂಡೇಶ್ವರಿ ಸೋಲು ನನಗೆ ಶಾಕಿಂಗ್ ಆಗಿರಲಿಲ್ಲ, ಇದು ಮಾಧ್ಯಮದವರಿಗೆ ಶಾಕಿಂಗ್ ವಿಚಾರ, ಜನಾದೇಶವನ್ನು ನಾನು ಒಪ್ಪಿಕೊಂಡಿದ್ದೇನೆ, ಅದು ಮುಗಿದ ಅಧ್ಯಾಯ...
ಸಿದ್ದರಾಮಯ್ಯ
ಸಿದ್ದರಾಮಯ್ಯ
ಮೈಸೂರು: ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಎಲ್ಲಾ 'ಭಾಗ್ಯ' ಯೋಜನೆಗಳನ್ನು ಸಮ್ಮಿಶ್ರ ಸರ್ಕಾರ ಮುಂದುವರಿಸಿಕೊಂಡು ಹೋಗುತ್ತದೆ ಎಂದು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರ ರಚನೆ ನಂತರ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿದರು. ದಲಿತರು, ವಿದ್ಯಾರ್ಥಿಗಳು, ರೈತರು ಮಹಿಳೆಯರಿಗಾಗಿ ಹಿಂದಿನ ಸರ್ಕಾರ ರೂಪಿಸಿರುವ ಜನಪರ ಕಲ್ಯಾಣ ಯೋಜೆನಗಳನ್ನು ಸಮ್ಮಿಶ್ರ ಸರ್ಕಾರ ಮುಂದುವರಿಸಿಕೊಂಡು ಹೋಗುತ್ತದೆ. ಈ ಸಂಬಂಧ ಗುರುವಾರ ಸಮನ್ವಯ ಸಮಿತಿ ಸಭೆ ನಡೆಯಲಿದೆ ಎಂದು ಹೇಳಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲು ಆಘಾತ ತಂದಿದೆಯೇ?
ಚಾಮುಂಡೇಶ್ವರಿ ಸೋಲು ನನಗೆ ಶಾಕಿಂಗ್ ಆಗಿರಲಿಲ್ಲ, ಇದು ಮಾಧ್ಯಮದವರಿಗೆ ಶಾಕಿಂಗ್ ವಿಚಾರ, ಜನಾದೇಶವನ್ನು ನಾನು ಒಪ್ಪಿಕೊಂಡಿದ್ದೇನೆ,  ಅದು ಮುಗಿದ ಅಧ್ಯಾಯ, ಅದರ ಬಗ್ಗೆ ಚರ್ಚಿಸಲು ನಾನು ಬಯಸುವುದಿಲ್ಲ.
ಚಾಮುಂಡೇಶ್ವರಿಯಲ್ಲಿ ನಿಮ್ಮನ್ನು ಬೆಂಬಲಿಸಿದ ಜನರಿಗೆ ಕೃತಜ್ಞತೆ ಹೇಳುತ್ತೀರಾ?
ಆ ಬಗ್ಗೆ ನಾನು ಇನ್ನೂ ಚಿಂತಿಸಿಲ್ಲ. ಚುನಾವಣೆಯಲ್ಲಿ ಬೆಂಬಲಿಸಿದ ಬಾದಾಮಿ ಜನತೆಗೆ ಧನ್ಯವಾದ ಹೇಳಿದ್ದೇನೆ, ಅಲ್ಲಿನ ಹಳ್ಳಿಗಳಿಗೆ ಭೇಟಿ ನೀಡಿದಾಗ ನನಗೆ ತುಂಬಾ ಸಂತೋಷವಾಯಿತು. ಚಾಮುಂಡೇಶ್ವರಿ ಜನ ನನ್ನ ಜೊತೆ ನಿಲ್ಲಲಿಲ್ಲ, ಹಾಗಾಗಿ ಅದರ ಬಗ್ಗೆ ಚರ್ಚಿಸುವುದಿಲ್ಲ.
ಸಚಿವ ಸ್ಥಾನ ಸಿಗದೇ ಅಸಮಾಧಾನ ಗೊಂಡಿರುವ ಅತೃಪ್ತ ಶಾಸಕರನ್ನು ಭೇಟಿ ಮಾಡಿದ್ದೀರಾ?
ಯಾವುದೇ ಅಸಮಾಧಾನವಿಲ್ಲ, ಯಾವ ಶಾಸಕರು ಅತೃಪ್ತರಾಗಿಲ್ಲ, ಪ್ರತಿಯೊಬ್ಬರ ಜೊತೆ ನಾನು ಮಾತನಾಡಿದ್ದೇನೆ, ಎಂಬಿ ಪಾಟೀಲ್, ಬಿಸಿ ಪಾಟೀಲ್, ಸುಧಾಕರ್, ಈಶ್ವರ ಖಂಡ್ರೆ, ಸಂಗಮೇಶ್, ಎಂಟಿಬಿ ನಾಗರಾಜ್ ಸೇರಿದಂತೆ ಹಲವರ ಜೊತೆ ಸಭೆ ನಡೆಸಿದ್ದೇನೆ. ಒಂದು ವೇಳೆ ನೀವು ಸಲಹೆ ನೀಡಿದರೇ  ಉಳಿದವರ ಜೊತೆ ಮಾತನಾಡಲು ನಾನು ಸಿದ್ಧನಿದ್ದೇನೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ,ಎಸ್ ಯಡಿಯೂರಪ್ಪ ಬಿ,ಸಿ ಪಾಟೀಲ್ ಮತ್ತಿತರರನ್ನು ಫೋನಿನಲ್ಲಿ ಸಂಪರ್ಕಿಸಿ ಹಣ ಮತ್ತು ಅಧಿಕಾರದ ಆಮೀಷ ಒಡ್ಡಿದ್ದಾರೆ, ಬಿಜೆಪಿ ಜೊತೆ ಕೈ ಜೋಡಿಸುವಂತೆ ಕೇಳಿದ್ದಾರೆ, ನಮ್ಮ ಯಾವುದೇ ಶಾಸಕರು ಬಿಜೆಪಿ ಜೊತೆ ಹೋಗುವುದಿಲ್ಲ ಎಂಬ ಆತ್ಮ ವಿಶ್ವಾಸ ನನಗಿದೆ.
ಹಲವು ಕಾಂಗ್ರೆಸ್ ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದ್ದು, ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರಲ್ಲ?
ಯಡಿಯೂರಪ್ಪ ಮಾತಿಗೆ ತುಂಬಾ ಮಹತ್ವ ನೀಡುವ ಅಗತ್ಯವಿಲ್ಲ, ನಮ್ಮ ಯಾವುದೇ ಶಾಸಕರು ಬಿಜೆಪಿ ಜೊತೆ ಹೋಗುವುದಿಲ್ಲ, ಯಡಿಯೂರಪ್ಪ ಭ್ರಮೆಯಲ್ಲಿ ಬದುಕುತ್ತಿದ್ದಾರೆ, ಸಮ್ಮಿಶ್ರ ಸರ್ಕಾರ 5 ವರ್ಷ ಅಧಿಕಾರ ಪೂರ್ಣಗೊಳಿಸುತ್ತದೆ.
ಸಿಎಂ ಆಗಲು ಆಸಕ್ತಿ ಇರಲಿಲ್ಲ ಎಂದು ಕುಮಾರ ಸ್ವಾಮಿ ಹೇಳಿದ್ದಾರಲ್ಲ?
ಅದರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ, ಈ ಸಂಬಂಧ ನಾನು ಕುಮಾರ ಸ್ವಾಮಿ ಜೊತೆ ಮಾತನಾಡಿಲ್ಲ, ನಾನು ಅದರ ಭಾಗವಲ್ಲ.
ನಿಮ್ಮನ್ನು ಹೊಗಳಿರುವ ಬಿಜಿಪಿ ನಿಮ್ಮ ಬಗ್ಗೆ ಮೃದು ಧೋರಣೆ ತಳೆದಿದೆ?
ಯಡಿಯೂರಪ್ಪ ಮಾತ್ರವಲ್ಲ ರಾಜ್ಯದ ಜನರಿಗೆ ನನ್ನ ಮೇಲೆ ಪ್ರೀತಿಯಿದೆ, ಅದು ಏನಾದರೂ ಇರಲಿ ಬಿಜೆಪಿಗೆ ನಾನೂ ಕೃತಜ್ಞನಾಗಿದ್ದೇನೆ.
ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ನಿಮ್ಮ ಹೇಳಿಕೆಗೆ ಈಗಲೂ ಬದ್ಧರಾಗಿದ್ದೀರಾ?
ಹೌದು,  ಆ ಹೇಳಿಕೆ ಬಗ್ಗೆ ನನಗೆ ಸ್ಪಷ್ಟತೆ ಇದೆ, ಮುಂಬರುವ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ನನ್ನ ಬೆಂಬಲಿಗರಿಗೋಸ್ಕರ ನಾನು ಸಕ್ರಿಯ ರಾಜಕಾರಣದಲ್ಲಿರುತ್ತೇನೆ, ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂಬುದು ಮಾದ್ಯಮಗಳ ಕಲ್ಪನೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com