ಸಂಪುಟ ದರ್ಜೆ ಸ್ಥಾನಮಾನ ನೀಡಿ ಸಿದ್ದು 'ಮುನಿಸು' ಶಮನಕ್ಕೆ ಸರ್ಕಾರ ಯತ್ನ

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ತೆಗೆದುಕೊಂಡಿರುವ ಕೆಲವು ...
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
Updated on

ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ತೆಗೆದುಕೊಂಡಿರುವ ಕೆಲವು ನಿರ್ಧಾರಗಳಿಂದ ಮುನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಂತುಷ್ಟಗೊಳಿಸಲು ಸಂಪುಟ ದರ್ಜೆಯ ಸಚಿವ ಸ್ಥಾನಮಾನ ನೀಡುವ ಸಾಧ್ಯತೆಯಿದೆ. ಇನ್ನು ಕೆಲ ದಿನಗಳಲ್ಲಿಯೇ ಈ ಕುರಿತು ಅಧಿಕೃತ ಆದೇಶ ಹೊರಬೀಳಲಿದೆ.

ಸಮನ್ವಯ ಸಮಿತಿಯ ನೇತೃತ್ವ ವಹಿಸಿರುವ ಸಿದ್ದರಾಮಯ್ಯನವರು, ಮುಖ್ಯಮಂತ್ರಿ ಕುಮಾರಸ್ವಾಮಿ ನೂತನ ಬಜೆಟ್ ಮಂಡಿಸುವ ನಿರ್ಧಾರ ಪ್ರಕಟಿಸಿದಂದಿನಿಂದ ಸರ್ಕಾರದ ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದಾರೆ. ಇದರಿಂದ ಅವರ ಅಸಮಾಧಾನ ಮತ್ತು ಕೋಪವನ್ನು ಶಮನಗೊಳಿಸಲು ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಮುಂದಾಗಿದ್ದಾರೆ. ಈ ಕುರಿತು ನಿನ್ನೆ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರೇ ಮಾತನಾಡಿದ್ದಾರೆ.

ಸಿದ್ದರಾಮಯ್ಯನವರಿಗೆ ವಿಧಾನಸೌಧದಲ್ಲಿ ಕಚೇರಿಯೊಂದನ್ನು ಈಗಾಗಲೇ ಮೀಸಲಿಟ್ಟಿರುವ ಸರ್ಕಾರ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗುವುದು ಎಂದು ಪರಮೇಶ್ವರ್ ಹೇಳಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿಯವರನ್ನು ನೇಮಿಸಿ ಅವರಿಗೆ ನಿಗದಿತ ಸ್ಥಾನಮಾನ ನೀಡಲಾಗಿತ್ತು. ಅದೇ ರೀತಿಯ ಸ್ಥಾನಮಾನವನ್ನು ರಾಜ್ಯದಲ್ಲಿ ಸಿದ್ದರಾಮಯ್ಯನವರಿಗೆ ನೀಡಲು ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ ನೂತನ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ಸಿದ್ದರಾಮಯ್ಯನವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಆರೋಪ ಅವರ ಬೆಂಬಲಿಗರದ್ದಾಗಿತ್ತು. ನೂತನ ಬಜೆಟ್ ಮಂಡಿಸಬೇಕೆಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಸರ್ಕಾರದ ನಿರ್ಧಾರ ಸಿದ್ದರಾಮಯ್ಯನರಲ್ಲಿ ಅಸಮಾಧಾನ ಉಂಟುಮಾಡಿದ್ದು ಕೂಡ ಅವರ ಅಭಿಮಾನಿಗಳಲ್ಲಿ ಬೇಸರ ತಂದಿದೆ. ಬಜೆಟ್ ಮಂಡನೆ ಕುರಿತಂತೆ ಕುಮಾರಸ್ವಾಮಿಯವರಿಗೆ ಪರಮೇಶ್ವರ್ ಬೆಂಬಲ ನೀಡುತ್ತಿರುವುದು ಕೂಡ ಸಿದ್ದರಾಮಯ್ಯನವರಿಗೆ ಸರಿ ಕಂಡುಬರುತ್ತಿಲ್ಲ. ಈ ಎಲ್ಲ ವಿದ್ಯಮಾನಗಳ ಹಿನ್ನಲೆಯಲ್ಲಿ ಸಿದ್ದರಾಮಯ್ಯನವರ ಅಸಮಾಧಾನವನ್ನು ತಣಿಸುವ ಪ್ರಯತ್ನ ಸರ್ಕಾರದಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯನವರು ಈಗ ಧರ್ಮಸ್ಥಳದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ನಿನ್ನೆ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದರು.

ಸರ್ಕಾರದಲ್ಲಿ ಸಿದ್ದರಾಮಯ್ಯನವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ, ಜೆಡಿಎಸ್ ಸರ್ಕಾರದಲ್ಲಿ ಪ್ರಾಬಲ್ಯ ಹೊಂದಿದೆ ಎಂಬ ಆರೋಪವನ್ನು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಳ್ಳಿ ಹಾಕಿರುವ ಡಾ ಜಿ ಪರಮೇಶ್ವರ್, ಸಿದ್ದರಾಮಯ್ಯನವರು ನಮ್ಮ ನಾಯಕರು, ಸಮನ್ವಯ ಸಮಿತಿ ಮುಖ್ಯಸ್ಥರಾಗಿರುವುದರಿಂದ ಸರ್ಕಾರದಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳುವ ಮೊದಲು ಅವರ ಒಪ್ಪಿಗೆ ಪಡೆಯಲೇ ಬೇಕು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com