

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಕೆಲವು ಶಾಸಕರು ಲಾಬಿ ನಡೆಸುತ್ತಿದ್ದರೆ ಇತ್ತ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೆಲವು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಮುಂದಿನ ವರ್ಷದ ಲೋಕಸಭೆ ಚುನಾವಣೆಯವರೆಗೆ ಬಿ ಎಸ್ ಯಡಿಯೂರಪ್ಪನವರೇ ಮುಂದುವರಿಯುವ ಸಾಧ್ಯತೆಯಿದೆ.
ಒಬ್ಬ ನಾಯಕರು ಎರಡು ಹುದ್ದೆಗಳನ್ನು ವಹಿಸುವಂತಿಲ್ಲ ಎಂದು ಬಿಜೆಪಿ ಪಕ್ಷದ ನೀತಿಯಾಗಿದ್ದರೂ ಕೂಡ ಬಿಜೆಪಿ ನಾಯಕರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿಚಾರದಲ್ಲಿ ವಿನಾಯಿತಿ ತೋರುವ ಸಾಧ್ಯತೆಯಿದೆ. ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ರಾಜ್ಯ ಬಿಜೆಪಿ ನಾಯಕರಾದ ಸಿ ಟಿ ರವಿ, ಅರವಿಂದ ಲಿಂಬಾವಳಿ ಮತ್ತು ಯಡಿಯೂರಪ್ಪನವರ ಆಪ್ತೆ ಶೋಭಾ ಕರಂದ್ಲಾಜೆ ಈ ಸ್ಥಾನಗಳಿಗೆ ಆಕಾಂಕ್ಷಿಗಳಾಗಿದ್ದು ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಡಿಯೂರಪ್ಪನವರೇ ಮುಂದುವರಿಯುವ ಸಾಧ್ಯತೆಯಿದೆ ಎಂದು ಬಿಜೆಪಿ ನಾಯಕರುಗಳೇ ಹೇಳುತ್ತಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸಿಕ್ಕಿರುವ ಮಾಹಿತಿ ಪ್ರಕಾರ, 48 ಗಂಟೆಗಳ ಕಾಲ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಅಧಿಕಾರ ವಹಿಸಿಕೊಂಡಾಗಲೇ ಕೆಲವು ಬಿಜೆಪಿ ನಾಯಕರು ದೆಹಲಿಯಲ್ಲಿ ನಾಯಕರ ಬಳಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.
ನಂತರ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮತ್ತು ರಾಜ್ಯದಲ್ಲಿನ ಪ್ರಸ್ತುತ ರಾಜಕೀಯ ಪರಿಸ್ಥಿತಿಯಿಂದಾಗಿ ರಾಜ್ಯಾಧ್ಯಕ್ಷ ನೇಮಕ ವಿಚಾರ ಹಿಂದೆ ಸರಿದಿದೆ. ವಿಧಾನಸಭೆಯ ಪ್ರತಿಪಕ್ಷ ನಾಯಕರು ಯಡಿಯೂರಪ್ಪನವರು ಆಗಿರುವುದರಿಂದ ಕೆಲವರು ರಾಜ್ಯಾಧ್ಯಕ್ಷ ಹುದ್ದೆಗೆ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಪ್ರಸ್ತುತ ಈ ಮೂರು ನಾಯಕರ ಮಾತು ಕೇಳಿಬರುತ್ತಿದೆ. ಸಿ ಟಿ ರವಿಯವರು ಪಕ್ಷದಲ್ಲಿ ಸಂಘಟನೆಗೆ ಹೆಸರಾಗಿದ್ದರೆ ಲಿಂಬಾವಳಿ ಬೆಂಗಳೂರಿನಲ್ಲಿ ಪ್ರಮುಖ ನಾಯಕ. ಅವರು ಪರಿಶಿಷ್ಟ ಜಾತಿಗೆ ಸೇರಿದವರು. ಶೋಭಾ ಕರಂದ್ಲಾಜೆ ಸಂಸದೆ ಹಾಗೂ ಮಾಜಿ ಮಂತ್ರಿಯಾಗಿದ್ದವರು. ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಸಿ ಟಿ ರವಿ ಈ ಹಿಂದೆ ಕೂಡ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಲವು ವ್ಯಕ್ತಪಡಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿ ಟಿ ರವಿ, ಬಿಜೆಪಿಯಲ್ಲಿ ಆಕಾಂಕ್ಷಿಗಳು ಎಂಬ ಪದ್ಧತಿಯಿಲ್ಲ, ರಾಜ್ಯದ ಹಿರಿಯ ಮುಖಂಡರು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದರೆ ಶೋಭಾ ಕರಂದ್ಲಾಜೆ ಈ ಬಗ್ಗೆ ವದಂತಿಯನ್ನು ತಳ್ಳಿ ಹಾಕಿದರು.