

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಾಲ್ಕನೇ ಹಂತದ ಜನಾಶೀರ್ವಾದ ಯಾತ್ರೆ ನಡೆಸುತ್ತಿರುವ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡಾ ರಾಜ್ಯಕ್ಕೆ ಆಗಮಿಸಿದ್ದಾರೆ.
ಬೆಳಿಗ್ಗೆ ತುಮಕೂರಿಗೆ ಆಗಮಿಸಿದ ಅಮಿತ್ ಶಾ, ನೇರವಾಗಿ ಸಿದ್ದಗಂಗಾ ಮಠಕ್ಕೆ ತೆರಳಿ ಸ್ವಾಮೀಜಿಗಳ ದರ್ಶನ ಪಡೆದಿದ್ದಾರೆ.ಸಿದ್ಧಗಂಗಾ ಮಠದಲ್ಲಿ ನಡೆದಾಡುವ ದೇವರು ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದೆನು. ಈ ವಯಸ್ಸಿನಲ್ಲೂ ಅವರು ಮಾಡುತ್ತಿರುವ ನಿರಂತರ ಕಾಯಕ ಅತ್ಯಂತ ಸ್ಫೂರ್ತಿದಾಯಕ. ಅವರ ಜೀವನವೇ ನಮಗೆ ಪಾಠ ಎಂದು ಹೇಳಿದ್ದಾರೆ.
ಅಮಿತ್ ಶಾ ಸಿದ್ದಗಂಗಾ ಮಠದ ಶ್ರೀಗಳನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ನಾನಾ ವಿಶ್ಲೇಷಣೆಗಳಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲಿಂಗಾಯತ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಸಲುವಾಗಿಯೇ ಅಮಿತ್ ಶಾ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.