ಬೆಂಗಳೂರು: ಬೆಂಗಳೂರಿನ ಕೃಷ್ಣರಾಜಪುರ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಮೊಮ್ಮಗ ಲಿಂಗಾರಾಜ ಅರಸು ಕಣಕ್ಕಿಳಿಯಲಿದ್ದಾರೆ.
53 ವರ್ಷದ ಲಿಂಗರಾಜ್ ಅರಸ್ ಸಾಫ್ಟ್‌ವೇರ್ ಸಂಸ್ಥೆಯೊಂದರ ಸಹಸಂಸ್ಥಾಪಕರಾಗಿದ್ದಾರೆ, ಕನ್ನಮಂಗಲ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣಾ ಕಣಕ್ಕೆ ಧುಮುಕಲಿದ್ದಾರೆ. ತಮ್ಮನ್ನು ದೇವರಾಜ ಅರಸು ಮೊಮ್ಮಗ ಎಂದೇ ಪರಿಚಯಿಸಿಕೊಳ್ಳುತ್ತಾರೆ.
ನಾನು ಈ ಬಾರಿಯ ಕರ್ನಾಟಕದ ವಿಧಾನಸಭೆ ಚುನಾವಣೆಗೆ ಸಿದ್ಧವಾಗಿದ್ದೇನೆ. ನನಗೆ ಬೇಕಾದ ರಾಜಕೀಯ ಅನುಭವಗಳು ಇವೆ. ನನ್ನ ಅಜ್ಜ ದೇವರಾಜ ಅರಸು ಅವರು ನನ್ನ ಮೇಲೆ ತುಂಬಾ ಪರಿಣಾಮ ಬೀರಿದ್ದಾರೆ. ಅವರು ಕರ್ನಾಟಕದಲ್ಲೊಂದು ಹೆಗ್ಗುರುತು, ಮುತ್ಸದ್ದಿ. ಅವರೇ ನನಗೆ ದಾರಿ ದೀಪವಾಗಿದ್ದಾರೆ, ದೆಹಲಿಯ ಯಶಸ್ಸಿನ ನಂತರ ಎಎಪಿ ಮತ್ತು ಅರವಿಂದ್ ಕೇಜ್ರಿವಾಲ್ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ದಿಸುವಂತೆ ಒತ್ತಾಯ ಮಾಡಿದರು ಎಂದು ಹೇಳಿದ್ದಾರೆ.
ನನ್ನ ತಾತ ಇದ್ದಾಗ ಇದ್ದ ಕಾಂಗ್ರೆಸ್ ಈಗ ಇಲ್ಲ, ಕಾಂಗ್ರೆಸ್ ಈಗ ಭ್ರಷ್ಟಾಚಾರದ ಪರ ಹಾಗೂ ಅಭಿವೃದ್ಧಿ ವಿರೋಧಿಯಾಗಿದೆ ಎಂದು ಆರೋಪಿಸಿದ್ದಾರೆ.
ಕಾರ್ಪೋರೇಟ್ ಕಂಪನಿಯೊಂದರ ಮುಖ್ಯಸ್ಥರಾಗಿರುವ ಲಿಂಗರಾಜ್ ಅವರಿಗೆ ಸರ್ಕಾರಿ ಅಧಿಕಾರಿಗಳಿಂದ ಕಹಿ ಅನುಭವವ ಆಗಿದೆಯಂತೆ, ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ನಾಗರಿಕರಿಗೆ ಮೂಲವಭೂತ ಸೌಕರ್ಯಗಳನ್ನು ಒದಗಿಸಲು ವಿಫಲರಾಗಿದ್ದಾರೆ, ಹೀಗಾಗಿ ಇದನ್ನೆಲ್ಲಾ ಸರಿ ಪಡಿಸಲು ರಾಜಕೀಯಕ್ಕೆ ಬರುತ್ತಿದ್ದೇನೆ ಎಂದು ಹೇಳಿದ್ದಾರೆ.
ಹಣ ಹಾಗೂ ಅಧಿಕಾರದ ದರ್ಪದಿಂದ ಸ್ಥಳೀಯ ಶಾಸಕ ಭೈರತಿ ಬಸವರಾಜು, ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿಲ್ಲ, ಆದರೆ 3 ಸಾವಿರ ಕೋಟಿ ರು ಅನುದಾನ ವನ್ನು ಮಾತ್ರ ವೆಚ್ಚ ಮಾಡಿದ್ದಾರೆ. ಕಾಂಗ್ರೆಸ್ ನಿಂದ ಬೈರತಿ ಬಸವರಜು ಕಣಕ್ಕಿಳಿಯಲಿದ್ದು, ಬಿಜೆಪಿ ಇನ್ನೂ ಅಭ್ಯರ್ಥಿಯನ್ನು ಘೋಷಿಸಿಲ್ಲ,
ಪಂಜಾಬ್ ನಲ್ಲಿ ಒಳ್ಳೆಯ ಸ್ಫರ್ಧೆ ನೀಡಿದ್ದೇವೆ. ಉತ್ತರಪ್ರದೇಶದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿಯೂ ಒಳ್ಳೆಯ ಫಲಿತಾಂಶ ಬಂದಿದೆ. ದೆಹಲಿಯಲ್ಲಿ ಬಲವಾಗಿ ನೆಲೆಯೂರಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಲಿಂಗಾರಾಜ ಅರಸು ಪ್ರತಿಕ್ರಿಯಿಸಿದ್ದಾರೆ.