2 ರೆಡ್ಡಿಗಳು+1 ಯೆಡ್ಡಿ: ಪ್ರಧಾನಿ ಮೋದಿ 2+1 ಸೂತ್ರಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು

2 ರೆಡ್ಡಿಗಳು+1 ಯೆಡ್ಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಾವು ಎರಡು ಕಡೆ ಹಾಗೂ ಪುತ್ರ ಮತ್ತೊಂದು....
ಕಾಂಗ್ರೆಸ್ ಫೇಸ್ ಬುಕ್ ನಲ್ಲಿ ಪ್ರಕಟಿಸಿದ ಚಿತ್ರ
ಕಾಂಗ್ರೆಸ್ ಫೇಸ್ ಬುಕ್ ನಲ್ಲಿ ಪ್ರಕಟಿಸಿದ ಚಿತ್ರ
ಬೆಂಗಳೂರು: 2 ರೆಡ್ಡಿಗಳು+1 ಯೆಡ್ಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಾವು ಎರಡು ಕಡೆ ಹಾಗೂ ಪುತ್ರ ಮತ್ತೊಂದು ಕಡೆ ಚುನಾವಣೆಗೆ ಸ್ಪರ್ಧಿಸುತ್ತಿರುವುದಕ್ಕೆ  2+1 ಸೂತ್ರ ಎಂದು ವ್ಯಂಗ್ಯವಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ತಿರುಗೇಟು ನೀಡಿದ್ದಾರೆ.
ಇಂದು ಬೆಳಗಷ್ಟೇ ಚಾಮರಾಜನಗರ ಜಿಲ್ಲೆ ಸಂತೇಮರಳ್ಳಿಯಲ್ಲಿ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, 'ರಾಜ್ಯದಲ್ಲಿ 2+1 ಸೂತ್ರ ಜಾರಿಯಲ್ಲಿದೆ. ಇದು ಕುಟುಂಬ ರಾಜಕಾರಣದ ವೈಖರಿ. ಸದಾ ನಿದ್ದೆ ಮಾಡುವ ರಾಜ್ಯದ ಮುಖ್ಯಮಂತ್ರಿಯ ಆವಿಷ್ಕಾರ ಇದು. ಅವರಿಗೆ ಸೋಲಿನ ಭಯ ಇದೆ, ಹೀಗಾಗಿಯೇ ಎರಡು ಕಡೆ ಸ್ಪರ್ಧಿಸುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದರು.
ಮೋದಿ ಭಾಷಣ ಮುಗಿದ ಕೆಲವೇ ನಿಮಿಷಗಳಲ್ಲಿ ಟ್ವೀಟ್ ಮಾಡಿದ ಸಿಎಂ, ‘ನನ್ನ ಬಗ್ಗೆ ಗೊತ್ತಿಲ್ಲ. ಆದರೆ, ನಿಮ್ಮ 2+1 ಸೂತ್ರದ ಬಗ್ಗೆ ಗೊತ್ತಿದೆ ಪ್ರಧಾನಿಗಳೇ. #2Reddy1Yeddy'ಎಂದು ಟಾಂಗ್ ನೀಡಿದ್ದಾರೆ.
ಪ್ರಧಾನಿ ಮೋದಿ ರೆಡ್ಡಿ ಸಹೋದರರ ಮೇಲಿನ ಸಿಬಿಐ ಪ್ರಕರಣಗಳನ್ನು ಮುಚ್ಚಿಹಾಕಿದ್ದರ ಬಗ್ಗೆ ಮಾತನಾಡದೆ ನುಣುಚಿಕೊಂಡಿದ್ದಾರೆ. ಅದರ ಬದಲಿಗೆ 2+1 ಸೂತ್ರದ ಬಗ್ಗೆ ಮಾತನಾಡಿದ್ದಾರೆ. ಚುನಾವಣೆ ಗೆಲ್ಲಲು ಅವರ ಸೂತ್ರ ಬಗ್ಗೆ ಇಲ್ಲಿದೆ ವಿವರಣೆ: 2 ರೆಡ್ಡಿಗಳು + 1 ಯೆಡ್ಡಿ. #2Reddy1Yeddy’ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕವನ್ನು ಲೂಟಿಮಾಡಲು ಬಿಜೆಪಿಯ ‘ಭ್ರಷ್ಟ ಸೂತ್ರಗಳು’ 2 + 1 = 2 ರೆಡ್ಡಿಗಳು ಮತ್ತು 1 ಯಡ್ಡಿ. ಈ ಸೂತ್ರದ ಕುರಿತೇಕೆ ಮೋದಿಯವರೇ ಮಾತನಾಡುವುದಿಲ್ಲ? #2Reddy1Yeddy’ ಎಂದು ಕಾಂಗ್ರೆಸ್‌ನ ಕರ್ನಾಟಕ ಘಟಕದ ಫೇಸ್‌ಬುಕ್ ಪುಟದಲ್ಲಿ ಪ್ರಧಾನಿಯವರನ್ನು ಪ್ರಶ್ನಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com