ರಾಜಕೀಯಕ್ಕೆ ರೆಡ್ಡಿ ಬ್ರದರ್ಸ್ ಮರುಪ್ರವೇಶದಿಂದ ಜನರು ಚಿಂತಿತರಾಗಿದ್ದಾರೆ: ಸಿಎಂ ಸಿದ್ದರಾಮಯ್ಯ
ದೇಶದ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದು, ಐಷಾರಾಮಿ ಜೀವನ ನಡೆಸುತ್ತಿರುವ ರೆಡ್ಡಿ ಬ್ರದರ್ಸ್ ರಾಜಕೀಯಕ್ಕೆ ಮರು ಪ್ರವೇಶ ಮಾಡುತ್ತಿರುವುದರಿಂದ ರಾಜ್ಯದ ಜನತೆ ಚಿಂತಿತರಾಗಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ...
ಯಾದಗಿರಿ; ದೇಶದ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದು, ಐಷಾರಾಮಿ ಜೀವನ ನಡೆಸುತ್ತಿರುವ ರೆಡ್ಡಿ ಬ್ರದರ್ಸ್ ರಾಜಕೀಯಕ್ಕೆ ಮರು ಪ್ರವೇಶ ಮಾಡುತ್ತಿರುವುದರಿಂದ ರಾಜ್ಯದ ಜನತೆ ಚಿಂತಿತರಾಗಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಯಾದಗಿರಿಯ ಕಕ್ಕಾರಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಜನಾರ್ಧನ ರೆಡ್ಡಿ ಹಾಗೂ ಅವರ ಗ್ಯಾಂಗ್ ರಾಜಕೀಯಕ್ಕೆ ಮರು ಪ್ರವೇಶ ಮಾಡುತ್ತಿರುವುದಕ್ಕೆ ಜನರು ಚಿಂತಿತರಾಗಿದ್ದಾರೆಂದು ಹೇಳಿದ್ದಾರೆ.
ಕೋಮುವಾದದ ಮೂಲಕ ಬಿಜೆಪಿ ಜನರನ್ನು ಒಡೆಯಲು ಯತ್ನ ನಡೆಸುತ್ತಿದ್ದು, ಬಾದಾಮಿ ಮತ್ತು ಇಲ್ಲಿನ ಜನರು ಬಿಜೆಪಿ ವಿರುದ್ಧ ಮತ ಹಾಕಲಿದ್ದಾರೆಂದು ತಿಳಿಸಿದ್ದಾರೆ.
ಪಾರದರ್ಶಕ ಆಡಳಿತ ನೀಡುವುದರಲ್ಲಿ ಕಾಂಗ್ರೆಸ್ ಪಕ್ಷ ನಾಯಕರು ಹೆಸರು ಮಾಡಿದ್ದಾರೆ. ಜನರು ಕಾಂಗ್ರೆಸ್ ಪಕ್ಷಕ್ಕೇ ಮತ ಹಾಕಲಿದ್ದಾರೆಂಬ ವಿಶ್ವಾಸ ನನಗಿದೆ. ಸ್ಥಿರ ಸರ್ಕಾರಕ್ಕಾಗಿ ಜನರು ಕಾಂಗ್ರೆಸ್ ಗೆ ಮತ ಹಾಕಲಿದ್ದಾರೆ.
2008ರಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ 5 ವರ್ಷಗಳಲ್ಲಿ ಮೂರು ಬಾರಿ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿತ್ತು. ಬಿಜೆಪಿ ನಾಯಕರ ಅಧಿಕಾರದ ದಾಹದ ಕುರಿತು ಜನರಿಗೆ ತಿಳಿದಿದೆ ಎಂದಿದ್ದಾರೆ.