
ಬೆಂಗಳೂರು : ಆಧಾರವಿಲ್ಲದ ಆರೋಪ ಮಾಡುವ ಮೂಲಕ ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿ ನಾಯಕರು ಬೆಂಗಳೂರು ಜನತೆಯನ್ನು ಅಪಮಾನ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಡೈನಾಮಿಕ್ ಸಿಟಿ ಎಂದು ಇಡೀ ವಿಶ್ವದಲ್ಲಿಯೇ ಖ್ಯಾತಿ ಪಡೆದಿದೆ. ಅದನ್ನು ಹೊಗಳುವ ಬದಲು ಪ್ರಧಾನಿ ಮೋದಿ ಸಿನ್ ಸಿಟಿ ಎಂದು ಕರೆಯುವ ಮೂಲಕ ಅದರ ಖ್ಯಾತಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.
ಉನ್ನವೋ ಹಾಗೂ ಕಥುವಾ ಸಂತ್ರಸ್ತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ನಡೆಯುವ ಹೋರಾಟವನ್ನು ಪ್ರಧಾನಿ ನರೇಂದ್ರಮೋದಿ ಹೇಗೆ ಖಂಡಿಸುತ್ತಾರೆ. ನ್ಯಾಯಕ್ಕಾಗಿ ಬೇಡಿಕೆ ಸಲ್ಲಿಸಬಾರದೇ , ಇದು ಮಹಿಳೆಯರ ರಕ್ಷಣೆಯಲ್ಲಿ ಪ್ರಧಾನಿ ಅವರ ಮನೋಸ್ಥಿತಿಯನ್ನು ತೋರಿಸುತ್ತದೆ ಎಂದರು.
ಪರಿಶಿಷ್ಟ ಜಾತಿ, ಪಂಗಡಕ್ಕೆ ನೀಡಿರುವ ಮೀಸಲಾತಿಯನ್ನು ವಿರೋಧಿಸುವುದಾಗಿ ಆರ್ ಎಸ್ ಎಸ್ ಮುಖ್ಯಸ್ಥರು ಹೇಳುತ್ತಾರೆ. ಪರಿಶಿಷ್ಟ ಜಾತಿ, ಪಂಗಡದ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸುವ ಮೂಲಕ ಬಿಜೆಪಿ ತನ್ನ ನಿಲುವು ಏನೆಂಬುದನ್ನು ತೋರಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯನ್ನು ಲೋಕಸಭೆಯಲ್ಲಿನ ಪ್ರತಿಪಕ್ಷಗಳ ಸಮರ್ಥ ನಾಯಕ ಎಂಬುದನ್ನು ಮೋದಿ ಒಪ್ಪಿಕೊಳ್ಳಲ ಎಂದರು.
ರಾಜ್ಯದಲ್ಲಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಪರ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದ್ದು, ಮತ್ತೆ ಅಧಿಕಾರಕ್ಕೆ ಬರುವ ಸಂಪೂರ್ಣ ವಿಶ್ವಾಸವಿರುವುದಾಗಿ ಪರಮೇಶ್ವರ್ ತಿಳಿಸಿದರು.
Advertisement