ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಬದಾಮಿಯಲ್ಲೂ ಮುಖ್ಯಮಂತ್ರಿಗಳ ಸೋಲು ಖಚಿತ - ಪ್ರಧಾನಿ ನರೇಂದ್ರ ಮೋದಿ

ಮುಖ್ಯಮಂತ್ರಿ ಎಲ್ಲಿಂದಲೋ ಬದಾಮಿಗೆ ಬಂದು ಗೆಲ್ಲುವ ಕನಸು ಕಾಣುತ್ತಿದ್ದಾರೆ. ಆದರೆ, ಈ ಜನಸಾಗರವನ್ನು ನೋಡಿದ ತಕ್ಷಣ ಸಿದ್ಧರಾಮಯ್ಯ ನವರ ನಿದ್ದೆಗೆಡುವುದಂತೂ ಸತ್ಯ ಮುಖ್ಯಮಂತ್ರಿಗಳ ಸೋಲು ಖಚಿತ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.

ಜಮಖಂಡಿ : ಮುಖ್ಯಮಂತ್ರಿ ಎಲ್ಲಿಂದಲೋ ಬದಾಮಿಗೆ ಬಂದು ಗೆಲ್ಲುವ ಕನಸು ಕಾಣುತ್ತಿದ್ದಾರೆ. ಆದರೆ, ಈ ಜನಸಾಗರವನ್ನು ನೋಡಿದ ತಕ್ಷಣ ಸಿದ್ಧರಾಮಯ್ಯ ನವರ ನಿದ್ದೆಗೆಡುವುದಂತೂ ಸತ್ಯ  ಮುಖ್ಯಮಂತ್ರಿಗಳ ಸೋಲು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಬೆಳ್ಳಿಗೆ ಚಿತ್ರದುರ್ಗದಲ್ಲಿ ಶ್ರೀರಾಮುಲು ಅವರನ್ನು ಭೇಟಿ ಮಾಡಿದ್ದು, ಬದಾಮಿಯಲ್ಲೂ ಸಿದ್ದರಾಮಯ್ಯ ಸೋಲುವ ಬಗ್ಗೆ ಮಾಹಿತಿ ಪಡೆದಿರುವುದಾಗಿ ತಿಳಿಸಿದರು.

ಇಲ್ಲಿನ ಹಲಗಲಿಯ ಬೇಡರು ಸ್ವಾತಂತ್ರ್ಯ ಹೋರಾಟದಲ್ಲಿ ಮುಖ್ಯ ಭೂಮಿಕೆಯನ್ನು ನಿಭಾಯಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ರಾಷ್ಟ್ರ ಸೇವೆಗೆ ತ್ಯಾಗ ಮಾಡಿದ ಇಲ್ಲಿನ  ವೀರಯೋಧರ ಗಾಥೆ ನೆನಪಿನಲ್ಲಿ ಉಳಿಯುವಂಥದ್ದು ಎಂದರು.

ಕಾಂಗ್ರೆಸ್ ನ ಇಂದಿನ ಮನಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಸೋನಿಯಾ ಗಾಂಧಿ ಯವರು, ರಾಷ್ಟ್ರಪತಿಯವರು ದಲಿತ ಎನ್ನುವ ಒಂದೇ ಕಾರಣಕ್ಕೆ, ಇಲ್ಲಿಯ ತನಕ ಸೌಜನ್ಯಕ್ಕೂ ಕೂಡ ಭೇಟಿಯಾಗುವ ಮನಸ್ಸು ಮಾಡಲಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ನ ಇಂದಿನ ಮನಸ್ಥಿತಿ ಎಂತಹುದು ಎಂದರೆ, ಭಾರತವನ್ನು ವಿಭಜಿಸುವ ಶಕ್ತಿಗಳ ಜೊತೆಗೆ ನಿಲ್ಲುವ ಮಟ್ಟಕ್ಕೆ ಇಳಿದಿದ್ದು ಈ ದೇಶದ ದುರಂತವಾಗಿದೆ. ಕರ್ನಾಟಕದ ಜನತೆ ಯಾವತ್ತೂ ಈ ವಿಭಜನಕಾರಿ ರಾಜನೀತಿಯನ್ನು ಸಹಿಸೊದಿಲ್ಲ. ಮೇ 12 ರಂದು ಇಂಥವರಿಗೆ ಜನತೆ ಸರಿಯಾದ ಉತ್ತರ ಕೊಡಲಿದ್ದಾರೆ ಎಂದರು.

ಜನರನ್ನು ಜಾತಿ-ಪಂಥಗಳ ಹೆಸರಿನಲ್ಲಿ ವಿಭಜಿಸುತ್ತಿರುವ ಕಾಂಗ್ರೆಸ್ಸಿಗರೇ, ಕುವೆಂಪುರವರ ಗೀತೆ "ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ' ಎಂಬ ಒಗ್ಗಟ್ಟಿನ ಮಂತ್ರವನ್ನಾದರೂ ನೆನಪಿಸಿಕೊಳ್ಳಲಿ ಎಂದರು.

ಕಾಂಗ್ರೆಸ್ ನವರು ವಿಶ್ವಗುರು ಬಸವಣ್ಣನವರ ವಿಸ್ತೃತವಾದ ಸಿದ್ಧಾಂತವನ್ನು, ಅವರ ತತ್ವ ಸಂದೇಶ ವನ್ನು ಕೇವಲ 2 ಶಬ್ದಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ - "ನುಡಿದಂತೆ ನಡೆ". ಇದರ ಹೊರತು ನಿಮಗೆ ಬಸವಣ್ಣನವರ ಬಗ್ಗೆ ಏನು ತಿಳಿದಿಲ್ಲ ಎಂದು ಟೀಕಿಸಿದರು.

ಚುನಾವಣೆ ಸಮೀಪಿಸುತ್ತಿದ್ದಂತೆ ನಿಮಗೆ ಬಸವಣ್ಣ ನವರ ನೆನಪಾಯಿತು. ಆದರೆ ಅಟಲ್ ಬಿಹಾರಿ ವಾಜಪಯಿ ರವರ ಅಧಿಕಾರಾವಧಿಯಲ್ಲಿಯೇ ಪ್ರಪ್ರಥಮ ಬಾರಿಗೆ ನಾವು ಬಸವಣ್ಣ ನವರ ಪ್ರತಿಮೆಯನ್ನು ಸಂಸತ್ತಿನಲ್ಲಿ ಪ್ರತಿಷ್ಟಾಪಿಸಿದ್ದೆವು  ಎಂದು ತಿಳಿಸಿದರು.

ಈ ಪ್ರದೇಶ ಕಬ್ಬು ಬೆಳೆಗೆ ಹೆಸರು ವಾಸಿಯಾಗಿದೆ. ಇಲ್ಲಿನ ಸರ್ಕಾರ ಕಬ್ಬು ಬೆಳೆಗಾರರಿಗೆ ಸರಿಯಾದ ಬೆಲೆ ಕೊಡಿಸದೇ ಅನ್ಯಾಯ ಮಾಡಿದ್ದು ಅಕ್ಷಮ್ಯ. ಬಿಜೆಪಿಯ ಯಡಿಯೂರಪ್ಪನವರ ಸರ್ಕಾರ ಕಬ್ಬು ಬೆಳೆಗಾರರ ಸಂಪೂರ್ಣ ಹಿತವನ್ನು ಕಾಯುತ್ತದೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ  ಎಂದು ಹೇಳಿದರು.

 ಕಳೆದ ಬಾರಿ ಚುನಾವಣೆಯ ಸಂಧರ್ಬದಲ್ಲಿ ಬಾಗಲಕೋಟೆಯಲ್ಲಿ ಜವಳಿ ಪಾರ್ಕ್ ಮಾಡುವದಾಗಿ ಸಿದ್ಧರಾಮಯ್ಯ ನವರು ಆಶ್ವಾಸನೆ ನೀಡಿದ್ದರು. ಆ ಆಶ್ವಾಸನೆ ಪೂರ್ಣಗೊಳಿಸದೆ ಅವರು ಮತ್ತೆ ಹೇಗೆ ಬಾಗಲಕೋಟೆಗೆ ಬರುತ್ತಾರೆ ಎಂದು ಪ್ರಶ್ನಿಸಿದರು.

 ಮೇ 15 ರಂದು ಕರ್ನಾಟಕದಲ್ಲಿ ಅಭಿವೃದ್ಧಿ ಪರ, ರೈತಪರ ಸರ್ಕಾರ ಗದ್ದುಗೆಗೇರುವುದು ನಿಶ್ಚಿತ. ರೈತಬಂಧು ಶ್ರೀ ಯಡಿಯೂರಪ್ಪ ನವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯವು ಅಭಿವೃದ್ಧಿಯ ಹೊಸ ಉತ್ತುಂಗಕ್ಕೆ ಏರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

Related Stories

No stories found.

Advertisement

X
Kannada Prabha
www.kannadaprabha.com