ಮುರ್ಡೇಶ್ವರ: ಹಿಂದೂತ್ವ ಕಾರ್ಡ್ ಪ್ರಯೋಗಿಸಿದ ಉ. ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರ ಪ್ರದೇಶ ಮುರ್ಡೇಶ್ವರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹಿಂದೂತ್ವ ಕಾರ್ಡ್ ಪ್ರಯೋಗಿಸಿದರು.
ಉ. ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉ. ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಮುರ್ಡೇಶ್ವರ :  ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರ ಪ್ರದೇಶ ಮುರ್ಡೇಶ್ವರದಲ್ಲಿ  ಚುನಾವಣಾ ಪ್ರಚಾರ ಸಭೆಯಲ್ಲಿ  ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್,  ಹಿಂದೂತ್ವ ಕಾರ್ಡ್ ಪ್ರಯೋಗಿಸಿದರು.

ಆರ್ ಎನ್ ಎಸ್ ಕಾಲೇಜ್ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,  ಈ ಚುನಾವಣೆ ಸಾಮಾನ್ಯವಾದ ಚುನಾವಣೆ ಅಲ್ಲ, ದೇಶದ ಭದ್ರತೆ ಮತ್ತು  ಜಿಹಾದಿ ಶಕ್ತಿಗಳ ನಡುವಿನ  ಹೋರಾಟವಾಗಿದೆ ಎಂದರು.

1993ರಲ್ಲಿ ಭಟ್ಕಳದಲ್ಲಿ ನಡೆದಿದ್ದ ಕೋಮು ಹಿಂಸಾಚಾರವನ್ನು ನೆನಪು ಮಾಡಿಕೊಂಡ ಆದಿತ್ಯನಾಥ್,  ಶಿವನ ಕೇಂದ್ರವಾಗಿರುವ ಈ ವಲಯ ಜಿಹಾದಿ ಶಕ್ತಿಗಳಿಂದಾಗಿ ಕುಖ್ಯಾತಿ ಪಡೆದಿದೆ.  ಅಂದು ನಡೆದಿದ್ದ ಕೋಮು ಹಿಂಸಾಚಾರದಲ್ಲಿ 18 ಜನರ ಹತ್ಯೆಯಾಗಿತ್ತು ಎಂದು ಹೇಳಿದರು.

ಹಿಂದೂಗಳು ಒಗ್ಗಟ್ಟನಿಂದ ಬದುಕಬೇಕು, ಇಲ್ಲದಿದ್ದರೆ ಸಮಾಜ ವಿರೋಧಿಗಳು  ಹಿಂದೂ ಸಮಾಜವನ್ನು ಒಡೆದು ಅನುಕೂಲ ಪಡೆದುಕೊಳ್ಳುತ್ತಾರೆ.  ಮಾಜಿ ಶಾಸಕ ಡಾ. ಯು. ಚಿತ್ತರಂಜನ್  ಪ್ರಾರಂಭಿಸಿರುವ ಹೋರಾಟವನ್ನು ಮುಂದುವರೆಸುವಂತೆ ಜನರಿಗೆ ಕರೆ ನೀಡಿದರು.

ಕರಾವಳಿ ತೀರ ಪ್ರದೇಶದಲ್ಲಿ ಜಿಹಾದಿ ಶಕ್ತಿಗಳ ಪ್ರಾಬಲ್ಯ ಹೆಚ್ಚಾಗಿದ್ದು, ಇಲ್ಲಿನ ಕಾಂಗ್ರೆಸ್ ಸರ್ಕಾರ ಅವರಿಗೆ ನೆರವು ನೀಡುತ್ತಿದೆ ಎಂದು ಆಪಾದಿಸಿದರು. ಭಟ್ಕಳ ಹೆಸರು ಕೇಳಿದ್ದರೆ ಸಾಕು ಭಾರತದಲ್ಲಿನ ಜನರು ಭಯ ಪಡುವಂತಾಗಿದೆ. ಬಿಜೆಪಿ  ಅಧಿಕಾರಕ್ಕೆ ಬಂದರೆ ಭಟ್ಕಳದ ಐಡೆಂಟಿಟಿಯನ್ನು ಬದಲಿಸುವುದಾಗಿ  ಅವರು ಹೇಳಿದರು.

 ಸಮಾಜ ವಿರೋಧಿ ಶಕ್ತಿಗಳೊಂದಿಗೆ ರಾಜ್ಯಸರ್ಕಾರ ಕೈ  ಜೋಡಿಸಿದೆ ಎಂದು ಆರೋಪಿಸಿದ ಅವರು, ರಾಜಕೀಯ ಉದ್ದೇಶಕ್ಕಾಗಿ ಸಮಾಜವನ್ನು ಒಡೆಯುವುದು ಮುಖ್ಯಮಂತ್ರಿ ಸಿದ್ದರಾಮಯ್ಯ  ಸರ್ಕಾರದ ಅಜೆಂಡಾವಾಗಿದೆ ಎಂದರು.

ರಾಜ್ಯದ ಅಭಿವೃದ್ದಿ ಕುಂಠಿತಗೊಂಡಿದ್ದು, ಅಪರಾಧಗಳು, ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿವೆ. ಕೇಂದ್ರಸರ್ಕಾರ ನೀಡಿದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದು,ರಾಜ್ಯಾದ್ಯಂತ ಅರಾಜಕತೆ ಸೃಷ್ಟಿಯಾಗಿದೆ ಎಂದು ಟೀಕಿಸಿದರು

ಹಿಂದೂಗಳ ಭಾವನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಲಕ್ಷಿಸಿದ್ದಾರೆ.  ಶಿವಾಜಿ ಜಯಂತಿಯನ್ನು ನಿರ್ಲಕ್ಷಿ ಟಿಪ್ಪು ಜಯಂತಿಯನ್ನು ಆಚರಿಸುತ್ತಾರೆ ಎಂದು ಯೋಗಿ ಆದಿತ್ಯನಾಥ್ ಆರೋಪಿಸಿದರು.

 ಭಟ್ಕಳ ಬಿಜೆಪಿ ಅಭ್ಯರ್ಥಿ ಸುನೀಲ್ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಜಿ. ನಾಯಕ್ ಮತ್ತಿತರ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com