ಬಿಜೆಪಿ ತೊರೆದು ತಪ್ಪು ಮಾಡಿದ್ದೆ, ವಿಷಾದವಿದೆ; ಸಂದರ್ಶನದಲ್ಲಿ ಬಿ.ಎಸ್.ಯಡಿಯೂರಪ್ಪ

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶಿಕಾರಿಪುರ ಕ್ಷೇತ್ರದಿಂದ ಸತತ 7ನೇ ಬಾರಿಗೆ ಸ್ಪರ್ಧೆಗಿಳಿಯುತ್ತಿದ್ದು, ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ...
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ
Updated on: 
ಶಿಕಾರಿಪುರ: ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶಿಕಾರಿಪುರ ಕ್ಷೇತ್ರದಿಂದ ಸತತ 7ನೇ ಬಾರಿಗೆ ಸ್ಪರ್ಧೆಗಿಳಿಯುತ್ತಿದ್ದು, ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ, ಅಲ್ಲದೆ, ಮೇ.17 2018ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. 
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಎರಡು ದಿನಗಳಷ್ಟೇ ಬಾಕಿಯಿದ್ದು, ಯಡಿಯೂರಪ್ಪ ಅವರು ಚುನಾವಣಾ ಪ್ರಚಾರದಲ್ಲಿ ಕಾರ್ಯನಿರತರಾಗಿದ್ದಾರೆ. ಈ ನಡುವಲ್ಲೇ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಯಡಿಯೂರಪ್ಪ ಅವರು, ಚುನಾವಣೆ ಕುರಿತು ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ. 
ಚುನಾವಣೆಗೆ ಕೇವಲ 1 ದಿನ ಬಾಕಿರುವಾಗಲೇ ಶಿಕಾರಿಪುರದಲ್ಲಿ ಪ್ರಚಾರ ನಡೆಸುತ್ತಿದ್ದೀರಿ, ಗೆಲ್ಲುವ ವಿಶ್ವಾಸ ಎಷ್ಟಿದೆ? 
ಇಂದು (ಬುಧವಾರ) ಶಿಕಾರಿಪುರಕ್ಕೆ ಭೇಟಿ ನೀಡಿದ್ದೇನೆ. ನಾಳೆ (ಗುರುವಾರ) ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೇನೆ. ನನಗಾಗಿ ಪಕ್ಷದ ಕಾರ್ಯಕರ್ತರು ಹಗಲು, ರಾತ್ರಿ ಕಳೆಯುತ್ತಿದ್ದಾರೆ. ಎಲ್ಲವನ್ನೂ ಅವರ ಮೇಲೆಯೇ ಬಿಟ್ಟಿದ್ದೇನೆ. ಶಿಕಾರಿಪುರದಲ್ಲಿ ಕೆಲ ಗ್ರಾಮಗಳಷ್ಟೇ ನಾನು ಭೇಟಿ ನೀಡುತ್ತಿದ್ದು,ಸ ಮತಯಾಚನೆ ಮಾಡುತ್ತಿದ್ದೇನೆ. ಬಾದಾಮಿ ಕ್ಷೇತ್ರಕ್ಕೂ ಭೇಟಿ ನೀಡಬೇಕಿದೆ. ಗೆಲ್ಲುವುದರ ಕುರಿತು ನಾನು ತಲೆಕೆಡಿಸಿಕೊಳ್ಳುತ್ತಿಲ್ಲ. 50,000 ಮತಗಳ ಮೂಲಕ ನಾನು ಗೆಲುವು ಸಾಧಿಸುತ್ತೇನೆ. 
ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದೆ ಕಾಂಗ್ರೆಸ್, ಈ ಬಗ್ಗೆ ನಿಮ್ಮ ಅಭಿಪ್ರಾಯ? 
ಚುನಾವಣೆ ಕುರಿತು ಹಲವಾರು ಸಮೀಕ್ಷೆಗಳು ನಡೆದಿವೆ. ಕಾಂಗ್ರೆಸ್ ನಡೆಸಿದ ಸಮೀಕ್ಷೆಗಳು ತಪ್ಪಾಗಿವೆ. ಬಿಜೆಪಿ 140-150 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿದೆ. ಮೇ.17 ರಂದು ನಾನು ಸರ್ಕಾರ ರಚನೆ ಮಾಡುತ್ತೇನೆ. ಸರ್ಕಾರಕ್ಕೆ ಶುಭ ಹಾರೈಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈಗಾಗಲೇ ನಾನು ಆಹ್ವಾನವನ್ನೂ ನೀಡಿದ್ದೇನೆ. 
ಚುನಾವಣೆ ಗೆಲ್ಲಲು ರಾಜ್ಯ ಬಿಜೆಪಿ ಪ್ರಧಾನಿ ಮೋದಿ, ಅಮಿತ್ ಶಾ ಅವರೇ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆಯೇ? 
ಪ್ರಧಾನಿ ಮೋದಿ ವಿಶ್ವದಲ್ಲಿಯೇ ಅತ್ಯಂತ ಉನ್ನತ ನಾಯಕರಾಗಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮೋದಿ ಬಯಸಿದ್ದಾರೆ. ಇದೇ ಬಿಜೆಪಿಯ ಉದ್ದೇಶ ಕೂಡ ಹೌದು. ಹೀಗಾಗಿಯೇ ಅವರು ನಮ್ಮೊಂದಿಗೆ ಹೆಚ್ಚಿನ ಕಾಲ ಕಳೆದು, ಬೆಂಬಲ ನೀಡುತ್ತಿದ್ದಾರೆ. ಅವರ ಉತ್ತಮ ಕಾರ್ಯಗಳಿಂದ ನಾವು ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದ್ದೇವೆ. ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೇ ಮತ್ತು ಕರ್ನಾಟಕದ ಮೂಲಭೂತ ಸೌಕರ್ಯಗಳಿಗಾಗಿ ಮೋದಿಯವರು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದ್ದಾರೆ. 

ರಾಜ್ಯ ನಾಯಕತ್ವದ ಮೇಲೆ ಕೇಂದ್ರದ ಬಿಜೆಪಿ ನಾಯಕರ ಕಪ್ಪುಛಾಯೆ ಬೀಳಲಿದೆಯೇ? 
ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಯಾರು? ಅವರೇನು ರಾಜ್ಯದ ನಾಯಕರೇ? ಕಾಂಗ್ರೆಸ್ ಕೂಡ ರಾಹುಲ್ ಹಾಗೂ ಸೋನಿಯಾ ಗಾಂಧಿಯವರನ್ನು ಕರೆ ತಂದಿದೆ. ಆದರೆ, ಯಡಿಯೂರಪ್ಪ ಮೋದಿಯವರನ್ನು ಕರೆತಂದ ಕೂಡಲೇ ಕಾಂಗ್ರೆಸ್'ನವರು ಟೀಕೆ ಮಾಡುತ್ತಾರೆ. ಮೋದಿ ದೇಶದ ಪ್ರಧಾನಮಂತ್ರಿ. ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ನಾವು ಪಣತೊಟ್ಟಿದ್ದೇವೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಗೆಲ್ಲುತ್ತಾರೆಯೇ? ಗೆಲ್ಲುವ ಯಾವುದೇ ದಾರಿಗಳಿಲ್ಲದ ಕಾರಣಗಳಿಂದಲೇ ಅವರು ಬಾದಾಮಿಗೆ ಓಡಿ ಹೋದರು. ಅಲ್ಲಿಯೂ ಅವರು ಗೆಲ್ಲುವುದಿಲ್ಲ. 

ಶ್ರೀರಾಮುಲು ಮುಂದಿನ ಉಪ ಮುಖ್ಯಮಂತ್ರಿಯಾಗುತ್ತಾರೆಯೇ?
ಪ್ರಸ್ತುತದ ಪರಿಸ್ಥಿತಿಯಲ್ಲಿ ಈ ಬಗೆಗಿನ ಪ್ರಶ್ನೆಗಳು ಬೇಡ...

ಹಳೇ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದ್ದೇ ಮೇಲುಗೈ...ಈ ಬಗ್ಗೆ ನಿಮ್ಮ ಅಭಿಪ್ರಾಯ? 
ಅದು ತಪ್ಪು ತಿಳಿವಳಿಕೆಯಷ್ಟೇ... ಹಾಸನ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳು ಸೇರಿ ಒಟ್ಟು ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ. ನಮ್ಮ ಯಾವ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆಂಬುದನ್ನೂ ಕೂಡ ನಾನು ಹೇಳಬಲ್ಲೆ.

ವೋಟರ್ ಐಡಿ ಹಗರಣದಲ್ಲಿ ಬಿಜೆಪಿ ಕೈವಾಡವಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ, ಈ ಬಗ್ಗೆ ನಿಮ್ಮ ಪ್ರತಿಕ್ರಿಯೇನು? 
ನಕಲಿ ವೋಟರ್ ಐಡಿ ಕಾರ್ಡ್'ಗಳು ದೊರಕಿದ್ದು ಕಾಂಗ್ರೆಸ್ ನಾಯಕರ ಮನೆಯಲ್ಲಿ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು. ಇದೇ ರೀತಿಯ ಘಟನೆ ಬೀದರ್ ನಲ್ಲಿಯೂ ನಡೆದಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ 12ಕ್ಕೂ ಹೆಚ್ಚು ಬಾರಿ ಪತ್ರಗಳನ್ನು ಬರೆದಿದ್ದೇವೆ. ಆದರೆ, ಕ್ರಮ ಕೈಗೊಳ್ಳಲು ಆಯೋಗ ನಿರಾಕರಿಸಿತ್ತು. ಈಗಲಾದರೂ ಆಯೋಗ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇವೆ. ಆರೋಪಿಗಳು ಯಾವುದೇ ಪಕ್ಷಕ್ಕೆ ಸೇರಿದ್ದರೂ, ಕ್ರಮ ಕೈಗೊಳ್ಳಬೇಕು. 

ಕಾಂಗ್ರೆಸ್ ನೀಡಿದ ಅಲ್ಪಸಂಖ್ಯಾತ ಸ್ಥಾನಮಾನದಿಂದಾಗಿ ಬಿಜೆಪಿ ಲಿಂಗಾಯತ ಮತಗಳನ್ನು ಕಳೆದುಕೊಳ್ಳಲಿದೆಯೇ? 
ಖಂಡಿತವಾಗಿಯೂ ಇಲ್ಲ. ವೀರಶೈವ-ಲಿಂಗಾಯತ ವಿವಾದ ಮುಗಿದ ಅಧ್ಯಾಯ. ತಮ್ಮ ಬುಡಕ್ಕೇ ಬಂದ ಕಾರಣ ಇದೀಗ ಕಾಂಗ್ರೆಸ್ ವಿವಾದದ ಬಗ್ಗೆ ಮೌನವಹಿಸಿದೆ. ವಿವಾದವೊಂದು ರಾಜಕೀಯ ಪಿತೂರಿಯಷ್ಟೇ. ಇದರಿಂದ ಯಾರಿಗೂ ಲಾಭವಾಗಲಿಲ್ಲ. ಒಂದು ವೇಳೆ ಆಗಿರವುದೇ ಆದರೆ, ಕಾಂಗ್ರೆಸ್ ಇದರಿಂದ ಹಿನ್ನಡೆಯುಂಟಾಗಿದೆ. 

ನಮ್ಮ ನಾಯಕರಿಗೇಕೆ ಹಿಂದುತ್ವ ಪ್ರಾಥಮಿಕ ಕಾರ್ಯಸೂಚಿಯಾಗಿದೆ? 
ಬೆಳಿಗ್ಗೆಯಿಂದ ನಾನು ಮಾತನಾಡಿದ್ದನ್ನು ಕೇಳಿದ್ದೀರಾ? ಮುಸ್ಲಿಮರು, ಕ್ರಿಶ್ಚಿಯನ್ನರು ಹಾಗೂ ಇತರರು ಎಂದು ನಾವು ವಿಭಜನೆ ಮಾಡಿಲ್ಲ. ಎಲ್ಲರನ್ನೂ ಒಂದೇ ರೀತಿ ನೋಡುತ್ತಿದ್ದೇವೆ. ಭಾಗಲಕ್ಷ್ಮಿ ಯೋಜನೆಯಡಿಯಲ್ಲಿ ನೀಡಲಾಗುತ್ತಿದ್ದ ರೂ.2 ಲಕ್ಷ ಹಣವನ್ನು ಹೆಚ್ಚಿಸುವುದಾಗಿ ನಾನು ಭರವಸೆ ನೀಡಿದ್ದೇನೆ. ಯೋಜನೆಯಿಂದ ಶೇ.25-30 ರಷ್ಟು ಮುಸ್ಲಿಮರಿಗೆ ಲಾಭವಾಗಿದೆ. ಕೋಮು ರಾಜಕೀಯ ನಾನೆಂದಿಗೂ ಮಾಡಿಲ್ಲ. 

2013ರ ಸಾರ್ವಜನಿಕರ ಸ್ಮರಣೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮೇಲೆ ಪರಿಣಾಮ ಬೀರಲಿದೆಯೇ? 
ಖಂಡಿತವಾಗಿಯೂ ಇಲ್ಲ. ನಾವು ಬಿಜೆಪಿ, ಕೆಜೆಪಿ ಮತ್ತು ಶ್ರೀರಾಮುಲು ಪಕ್ಷವೆಂದು ಮೂರು ಭಾಗಗಳನ್ನಾಗಿ ಮಾಡಿದ್ದೇವೆ. 2013ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆದರೆ, ಇಂದು ನಾವು ಒಗ್ಗೂಡಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲಗಳು, ಸಮಸ್ಯೆಗಳಿಲ್ಲ. ಈ ಬಾರಿಯ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. 

ಬಿಜೆಪಿ ತೊರೆದಿದ್ದಕ್ಕೆ ವಿಷಾದವಿದೆಯೇ? 
ಹೌದು, ಖಂಡಿತ... ನಾನು ತಪ್ಪು ಮಾಡಿದ್ದೆ.... ನಾನು ತಪ್ಪು ಮಾಡಿದಾಗಲೂ ಬಿಜೆಪಿ ಹಿರಿಯ ನಾಯಕರು ನನ್ನನ್ನು ಕ್ಷಮಿಸಿದ್ದರು. ದೊಡ್ಡ ಜವಾಬ್ದಾರಿಯನ್ನು ನೀಡಿದ್ದರು. ಇದೇ ಮೊದಲ ಬಾರಿಗೆ ಇಡೀ ದೇಶದಾದ್ಯಂತ ನನ್ನನ್ನು ಕರ್ನಾಟಕ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಣೆ ಮಾಡಿದರು. ರಾಜ್ಯ ಬಿಜೆಪಿ ರಾಜ್ಯಧ್ಯಕ್ಷನಾದೆ. ಬಿಜೆಪಿ ರಾಜ್ಯಾಧ್ಯಕ್ಷನಾಗಿ 2 ವರ್ಷವಾಗಿದೆ. ಮೋದಿ ಹಾಗೂ ಅಮಿತ್ ಶಾ ಅವರು ನನ್ನ ಮೇಲೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸುತ್ತಿರುವುದಕ್ಕೆ ಸಾಕಷ್ಟು ಸಂತಸವಿದೆ. 

ನಮ್ಮ ಮಗ ವಿಜಯೇಂದ್ರ ಸ್ಪರ್ಧಿಸಿದ್ದರೆ, ವರುಣಾ ಕ್ಷೇತ್ರದಲ್ಲಿ ಯತೀಂದ್ರ ಅವರ ಗೆದಿದ್ದರೆ ಅದು ಬಿಜೆಪಿಗೆ ದೊಡ್ಡ ಸವಾಲಾಗಲಿದೆ ಪರಿಣಮಿಸಲಿತ್ತು ಎಂದು ಕಾಂಗ್ರೆಸ್ ಆಂತರಿಕ ಸಮೀಕ್ಷೆಯೊಂದು ಹೇಳಿದೆ, ನಮ್ಮ ಮಗನಿಗೇಕೆ ಪಕ್ಷ ಟಿಕೆಟ್ ನೀಡಲಿಲ್ಲ? 
ಟಿಕೆಟ್ ಹಂಚಿಕೆಗೂ ಮುನ್ನವೇ ನನ್ನ ಮಗ ವರುಣಾ ಕ್ಷೇತ್ರ ಜನತೆಯ ಕಲ್ಯಾಣಕ್ಕೆ ಕೆಲಸ ಮಾಡುತ್ತಿದ್ದ. ಟಿಕೆಟ್ ನಿರಾಕರಿಸಿದ ಬಳಿಕವು ನನ್ನ ಪುತ್ರ ತನ್ನ ಕಾರ್ಯವನ್ನು ಮುಂದುವರೆಸುತ್ತಿದ್ದಾನೆ. ಇದರಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಕಾಂಗ್ರೆಸ್ ಈಗಲೂ ಆ ಕ್ಷೇತ್ರದಲ್ಲಿ ಸಂಕಷ್ಟಗಳಿವೆ. ರಾಜ್ಯದ ಮುಖ್ಯಮಂತ್ರಿಗಳ ಅಭ್ಯರ್ಥಿ ಪುತ್ರ ಚುನಾವಣೆಯಲ್ಲಿ ಸ್ಪರ್ಧಿಸದಿರುವುದು ಒಳ್ಳೆಯದೆಂದು ಪಕ್ಷದ ಹಿರಿಯ ನಾಯಕರು ನಿರ್ಧಾರ ಕೈಗೊಂಡಿದ್ದರು ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com