ಕುಮಾರಸ್ವಾಮಿಗೆ ಸಿಎಂ ಪಟ್ಟ?: ಜೆಡಿಎಸ್ ಗೆ ಕಾಂಗ್ರೆಸ್ ಬೇಷರತ್ ಬೆಂಬಲ; ಸಿದ್ದು, ಪರಂ ಸಹಮತ

ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ....
ಗುಲಾಂ ನಬಿ ಆಜಾದ್, ಸಿದ್ದರಾಮಯ್ಯ, ಪರಮೇಶ್ವರ
ಗುಲಾಂ ನಬಿ ಆಜಾದ್, ಸಿದ್ದರಾಮಯ್ಯ, ಪರಮೇಶ್ವರ
ಬೆಂಗಳೂರು: ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ರಾಜಕೀಯ ವಲಯದಲ್ಲಿ ಹೈಡ್ರಾಮಾ ನಡೆಯುತ್ತಿದೆ.
ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಬಿಜೆಪಿಯನ್ನು ಅಧಿಕಾರದಿಂದ ದೂಡವಿಡಲು ಮೂರನೇ ಸ್ಥಾನದಲ್ಲಿರುವ ಜೆಡಿಎಸ್ ಗೆ ಬೇಸರತ್ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ.
ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿ ಪರನೇಶ್ವರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡಲು ಕಾಂಗ್ರೆಸ್ ಸಿದ್ಧವಿದೆ ಎಂದರು.
ಜನಾದೇಶಕ್ಕೆ ನಾವು ತಲೆ ಬಾಗುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿಲ್ಲ. ಹೀಗಾಗಿ ಜೆಡಿಎಸ್ ಗೆ ಬಂಬಲ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಗುಲಾಂ ನಬಿ ಆಜಾದ್ ಅವರು ತಿಳಿಸಿದ್ದಾರೆ.
ನಾವು ದೇವೇಗೌಡ ಮತ್ತು ಕುಮಾರಸ್ವಾಮಿ ಅವರೊಂದಿಗೆ ದೂರವಾಡಿ ಮಾತುಕತೆ ನಡೆಸಿದ್ದು, ಅವರು ಕಾಂಗ್ರೆಸ್ ಬೆಂಬಲವನ್ನು ಒಪ್ಪಿಕೊಂಡಿದ್ದಾರೆ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ಬೆಂಬಲವನ್ನು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಒಪ್ಪಿಕೊಂಡಿದ್ದು, ಬೆಂಬಲ ಘೋಷಿಸಿದ ಕಾಂಗ್ರೆಸ್ ಗೆ ಧನ್ಯವಾದ ಎಂದಿದ್ದಾರೆ.
ಕುಮಾಸ್ವಾಮಿಗೆ ಸಿಎಂ ಪಟ್ಟ?
ಸರ್ಕಾರ ರಚನೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಸರತ್ತು ನಡೆಸುತ್ತಿದ್ದು, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಜತೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು ಈಗಾಗಲೇ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲು ಸಿದ್ಧ ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಇನ್ನು ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ನಿಯೋಗ ಜೆಡಿಎಸ್ ಮುಖಂಡರನ್ನು ಭೇಟಿ ಮಾಡಿ, ಶತಾಯಗತಾಯ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ರಣತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.
ಒಟ್ಟು 222 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 104 ಸ್ಥಾನ ಹಾಗೂ ಕಾಂಗ್ರೆಸ್ 78 ಸ್ಥಾನ, ಜೆಡಿಎಸ್ 38 ಸ್ಥಾನ ಪಡೆದಿದ್ದು, ಒಬ್ಬರು ಕೆಪಿಜೆಪಿ, ಪಕ್ಷೇತರ ಒಬ್ಬರು ಗೆಲುವು ಸಾಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com