ರಾಜ್ಯಪಾಲ ವಜುಭಾಯ್ ವಾಲಾ ಮುಂದೆ ಸರ್ಕಾರ ರಚನೆ ಹಕ್ಕು ಮಂಡಿಸಿದ ಬಿಎಸ್'ವೈ

ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಆಯ್ಕೆಯಾಗಿದ್ದು, ಶಾಸಕಾಂಗ ಪಕ್ಷದ ಸಭೆ ಬಳಿಕ ಕೂಡಲೇ ರಾಜಭವನಕ್ಕೆ ತೆರಳಿದ ಬಿಜೆಪಿ ನಾಯಕರು, ರಾಜ್ಯಪಾಲ ವಜುಭಾಯ್ ವಾಲಾ ಅವರನ್ನು ಭೇಟಿ ಮಾಡಿದ್ದಾರೆ...
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಆಯ್ಕೆಯಾಗಿದ್ದು, ಶಾಸಕಾಂಗ ಪಕ್ಷದ ಸಭೆ ಬಳಿಕ ಕೂಡಲೇ ರಾಜಭವನಕ್ಕೆ ತೆರಳಿದ ಬಿಜೆಪಿ ನಾಯಕರು, ರಾಜ್ಯಪಾಲ ವಜುಭಾಯ್ ವಾಲಾ ಅವರನ್ನು ಭೇಟಿ ಮಾಡಿದ್ದಾರೆ. 
ಇಂದು ಬೆಳಿಗ್ಗೆ ನಡೆದ ಬಿಜೆಪಿ ನೂತನ ಶಾಸಕರ ಜತೆಗಿನ ಸಭೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ, ಶಿಕಾರಿಪುರದ ಶಾಸಕ, ಶಿವಮೊಗ್ಗ ಜಿಲ್ಲೆಯ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. 
ಬಳಿಕ ರಾಜಭವನಕ್ಕೆ ತೆರಳಿದ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ರಾಜ್ಯಪಾಲ ವಜುಭಾಯ್ ವಾಲಾ ಅವರನ್ನು ಭೇಟಿ ಮಾಡಿದರು. ಈ ವೇಳೆ 104 ಶಾಸಕರ ಬೆಂಬಲವಿರುವ ಎರಡು ಪತ್ರಗಳನ್ನು ರಾಜ್ಯಪಾಲರಿಗೆ ಸಲ್ಲಿಸಿದ ಯಡಿಯೂರಪ್ಪ ಅವರು, ಸರ್ಕಾರ ರಚನೆ ಮಾಡಲು ಮೊದಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. 
ಮೇ.17 ಗುರುವಾರ ದಿನದಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ಒಂದು ವಾರದೊಳಗಾಗಿ ಸದನದಲ್ಲಿ ಬಹುಮತ ಸಾಬೀತುಪಡಿಸುವುದಾಗಿ ಪತ್ರದಲ್ಲಿ ಕೋರಿದ್ದಾರೆಂದು ತಿಳಿದುಬಂದಿದೆ. 
ಪಕ್ಷ ನನ್ನನ್ನು ಶಾಸಕಾಂಗ ಸಭೆ ನಾಯಕನಾಗಿ ಆಯ್ಕೆ ಮಾಡಿದೆ. ಸರ್ಕಾರ ರಚನೆ ಕುರಿತು ಬಹುಮತ ಸಾಬೀತಿಗೆ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಈಗಾಗಲೇ ಪತ್ರವನ್ನು ನೀಡಲಾಗಿದೆ. ಶೀಘ್ರದಲ್ಲಿಯೇ ರಾಜ್ಯಪಾಲರು ನನ್ನನ್ನು ಕರೆಯಲಿದ್ದಾರೆ. ಈ ಬಗ್ಗೆ ನನಗೆ ವಿಶ್ವಾಸವಿದೆ. ಭೇಟಿ ಸಂದರ್ಭದಲ್ಲಿ ಸೂಕ್ತ ರೀತಿಯ ನಿರ್ಧಾರ ಕೈಗೊಳ್ಳುತ್ತೇನೆಂದು ವಜುಭಾಯ್ ವಾಲಾ ಅವರು ಭರವಸೆ ನೀಡಿದ್ದಾರೆ. ರಾಜ್ಯಪಾಲರಿಂದ ಮಾಹಿತಿ ಬಂದ ಕೂಡಲೇ ಈ ಬಗ್ಗೆ ಅಧಿಕೃತ ಮಾಹಿತಿ ನೀಡುತ್ತೇನೆಂದು ಯಡಿಯೂರಪ್ಪ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com